ಪಾಕಿಸ್ತಾನ ಪರ ಜಯಘೋಷ : ವಿಧಾನಸಭೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ | JANATA NEWS
ಬೆಂಗಳೂರು : ಸಂಭ್ರಮಾಚರಣೆ ಸಂದರ್ಭದಲ್ಲಿ ಪಾಕಿಸ್ತಾನ ಪರ ಜಯಘೋಷ ಕೂಗಿದ ಕಾಂಗ್ರೆಸ್ ಸಂಸದರ ಬೆಂಬಲಿಗರ ನಡವಳಿ ವಿರುದ್ಧ ಬಿಜೆಪಿ ಇಂದು ವಿಧಾನಸಭೆಯ ಕಲಾಪದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಕೆಳಮನೆ ಹಾಗೂ ಮೇಲ್ಮನೆ ಎರಡೂ ಕಡೆ ಸೇರಿದಂತೆ ರಾಜ್ಯಾದ್ಯಂತ ಬಿಜೆಪಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದೆ.
ಪ್ರತಿಪಕ್ಷದ ನಾಯಕ ಆರ್.ಅಶೋಕ ಅವರು ವಿಧಾನಸಭೆಯಲ್ಲಿ ಮಾತನಾಡಿ, ರಾಜ್ಯದ ಏಳು ಕೋಟಿ ಜನರ ಆತ್ಮ ವಿಧಾನಸೌಧದಲ್ಲಿದೆ. ಇಂತಹ ಸ್ಥಳದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಲಾಗಿದೆ. ಅಂಥವರಿಗೆಲ್ಲ ಇಲ್ಲಿಗೆ ಬರಲು ಅವಕಾಶ ಮಾಡಿಕೊಟ್ಟವರು ಯಾರು? ಇದರಿಂದ ರಾಜ್ಯದ ಜನತೆ ಆತಂಕ್ಕೊಳಗಾಗುವಂತಾಗಿದೆ. ಅವರಿಗೆ ರೆಡ್ ಕಾರ್ಪೆಟ್ ಹಾಸಿ ಇಲ್ಲಿಗೆ ಕರೆಸಿಕೊಂಡಿದ್ದಲ್ಲದೆ, ಅವರನ್ನು ಕಳುಹಿಸಿಕೊಟ್ಟವರು ಯಾರು? ಅವರಿಗೆ ಬಿರಿಯಾನಿ ತಿನ್ನಿಸಿ ರಕ್ಷಿಸುತ್ತಿರುವವರು ಯಾರು?, ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಈ ವೇಳೆ ಮಾತನಾಡಿದ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್, ಪಾರ್ಲಿಮೆಂಟ್‍ನಲ್ಲಿ ನುಗ್ಗಿದ್ದರಲ್ಲ ಎಂದರು. ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಬಳಿಕ ಮಾತು ಮುಂದುವರೆಸಿದ ಅಶೋಕ್ ಅವರು, ಸಂಸತ್‍ನಲ್ಲಿ ನುಗ್ಗಿದವರನ್ನು ಹಿಡಿದು ಚೆನ್ನಾಗಿ ರುಬ್ಬಿದರು. ನೀವೇನಾದರೂ ಅವರಿಗೆ ಹೊಡೆದಿರಾ" ಎಂದು ತಿರುಗೇಟು ನೀಡಿದರು.
ಒಂದು ವೇಳೆ ಮಾಧ್ಯಮದ ವರದಿ ಸುಳ್ಳಾಗಿದ್ದರೆ ಅವರನ್ನು ಜೈಲಿಗೆ ಹಾಕಿ, ನನ್ನ ಮೇಲೂ ಕೇಸು ಹಾಕಿ. ಈ ಘಟನೆ ಬಗ್ಗೆ ಸಣ್ಣ ಕ್ರಮ ಕೈಗೊಂಡಿಲ್ಲ. ಇದರ ಬಗ್ಗೆ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಬೇಕಿತ್ತು. ಶಾಸಕರ ಮೇಲೆ ಸ್ವಯಂಪ್ರೇರಿತ ಕೇಸು ಹಾಕುತ್ತಾರೆ, ಶಾಸಕರು ಘಟನಾ ಸ್ಥಳದಲ್ಲಿ ಇಲ್ಲವೆಂದರೂ ಕೇಸು ಹಾಕುತ್ತಾರೆ. ಪಿಎಫ್‍ಐ ಮೇಲಿನ ಕೇಸುಗಳನ್ನು ವಜಾ ಮಾಡಿದ್ದಾರೆ. ಹೀಗಾಗಿ ಕೋಲಾರ, ಶಿವಮೊಗ್ಗದಲ್ಲಿ ಮಚ್ಚು, ಲಾಂಗುಗಳ ಫ್ಲೆಕ್ಸ್ ಹಾಕಲಾಗಿದೆ. ಈ ಘಟನೆ ಬಗ್ಗೆ ಮುಖ್ಯಮಂತ್ರಿ ಚರ್ಚೆ ಮಾಡಬೇಕಿತ್ತು. ಇಡೀ ದೇಶಕ್ಕೆ ಅವಮಾನವಾಗಿದೆ. ಕನ್ನಡಿಗರು ತಲೆ ತಗ್ಗಿಸುವಂತಾಗಿದೆ. ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ" ಎಂದು ಆರೋಪಿಸಿದರು.