ಬೆಂಗಳೂರಿನ ಪಶು ಆಸ್ಪತ್ರೆ 2 ಎಕರೆ ಜಮೀನು ಅಲ್ಪಸಂಖ್ಯಾತರ ಇಲಾಖೆಗೆ ಹಸ್ತಾಂತರ : ಕಾಂಗ್ರೆಸ್ ಓಲೈಕೆ ರಾಜಕಾರಣ ವಿರುದ್ಧ ಆಕ್ರೋಶ | JANATA NEWS
ಬೆಂಗಳೂರು : ರಾಜಧಾನಿ ಬೆಂಗಳೂರಿನ ಹೃದಯ ಭಾಗದಲ್ಲಿರುವ ಪಶು ಆಸ್ಪತ್ರೆ ಮತ್ತು ನಿವೇಶನದೊಂದಿಗೆ 2 ಎಕರೆ ಜಮೀನನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರಿಸುವ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಆದೇಶಿಸಿದೆ.
ರಾಜ್ಯ ಸರ್ಕಾರದ ಈ ಆದೇಶದ ವಿರುದ್ಧ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸುನಿಲಕುಮಾರ್ ಕಾರ್ಕಳ ಅವರು ಆಕ್ರೋಶ ವ್ಯಕ್ತಪಡಿಸಿದ್ದು, ಪಾಕಿಸ್ತಾನ್ ಜಿಂದಾಬಾದ್ ಎಂದವರ ನಡುಮರಿಯುವ ತಾಕತ್ ಇಲ್ಲದ ಈ ಸರ್ಕಾರಕ್ಕೆ ಇಷ್ಟು ಬಹಿರಂಗವಾಗಿ ಮುಸ್ಲಿಂ ಓಲೈಕೆ ಮಾಡಲು ಲಜ್ಜೆ ಕಾಡುವುದಿಲ್ಲವೇ ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
"ಗೋಹತ್ಯೆ ನಿಷೇಧ ಕಾಯಿದೆಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿಕೆ ನೀಡಿ ಹಿಂದುಗಳ ಭಾವನೆಗೆ ಧಕ್ಕೆ ತಂದಿದ್ದ ಪಶು ಸಂಗೋಪನಾ ಸಚಿವರು, ಪಶುಚಿಕಿತ್ಸಾಲಯದ ಜಾಗವನ್ನು ಮುಸಲ್ಮಾನರ ಶ್ರೇಯೋಭಿವೃದ್ಧಿಗೆ ದಾನ ಮಾಡಿದ್ದಾರೆ. ಜಾಗ ಕೇಳಿದ ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಗೂ ದಾನ ಮಾಡಲು ಒಪ್ಪಿದ ಪಶು ಸಂಗೋಪನಾ ಖಾತೆ ಸಚಿವರಿಗೂ ಯಾವ ಪ್ರಶಸ್ತಿ ಕೊಡಬೇಕು ? ಪಾಕಿಸ್ತಾನ್ ಜಿಂದಾಬಾದ್ ಎಂದವರ ನಡುಮರಿಯುವ ತಾಕತ್ ಇಲ್ಲದ ಈ ಸರ್ಕಾರಕ್ಕೆ ಇಷ್ಟು ಬಹಿರಂಗವಾಗಿ ಮುಸ್ಲಿಂ ಓಲೈಕೆ ಮಾಡಲು ಲಜ್ಜೆ ಕಾಡುವುದಿಲ್ಲವೇ ?", ಎಂದು ಮಾಜಿ ಸಚಿವ ಸುನೀಲಕುಮಾರ ಅವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಅಧೀನದಲ್ಲಿನ ಚಾಮರಾಜಪೇಟೆ ವಿಧಾನಸಭಾಕ್ಷೇತ್ರ ವ್ಯಾಪಿಯಲ್ಲಿ ಚಲವಾಧಿಪಾಳ್ಯ ವಾರ್ಡ್, ಮೈಸೂರು ರಸ್ತೆ ಹಾಗೂ ಗೂಡ್ ಶೆಡ್ ರಸ್ತೆಗೆ ಹೊಂದಿಕೊಂಡಂತೆ ಪಶುಸಂಗೋಪನಾ ಇಲಾಖೆಯ ಪಶು ಆಸ್ಪತ್ರೆ ಮತ್ತು ನಿವೇಶನವನ್ನು(2-0 ಎಕರೆ) ಮೌಲಾನಾ ಆಜಾದ್ /ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ನಿರ್ಮಾಣಕ್ಕಾಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಹಸ್ತಾಂತರಿಸಲು ಆದೇಶಿಸಿ ಪಶುಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆ ಆದೇಶಿಸಿದೆ.