ಪಾಕಿಸ್ತಾನ ಪರ ಜಯಘೋಷ ಪ್ರಕರಣದಲ್ಲಿ ಮೂವರನ್ನು ಬಂಧನ : ಸಮರ್ಥಿಸಿದ ಸಚಿವರಿಗೆ ಭಾರಿ ಮುಖಭಂಗ | JANATA NEWS
ಬೆಂಗಳೂರು : ಫೆಬ್ರವರಿ 27 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ಕರ್ನಾಟಕ ಶಾಸಕರು ರಾಜ್ಯಸಭಾ ಚುನಾವಣೆಯಲ್ಲಿ ಮತ ಚಲಾಯಿಸಿದಾಗ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಮೂವರನ್ನು ವಿಧಾನಸೌಧ ಪೊಲೀಸರು ಇಂದು ಬಂಧಿಸಿದ್ದಾರೆ.
ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ನಾಸಿರ್ ಹುಸೇನ್ ಬೆಂಬಲಿಗರು ತಮ್ಮ ನಾಯಕನ ಗೆಲುವಿಗೆ ಹರ್ಷೋದ್ಗಾರ ಮಾಡುತ್ತಿದ್ದಾಗ ಘೋಷಣೆಗಳು ಎದ್ದವು ಎನ್ನಲಾಗಿದೆ.
ಘಟನೆ ನಡೆದದ್ದನ್ನು ನಿರಾಕರಿಸಿ ಅದು "ಪಾಕಿಸ್ತಾನ ಜಿಂದಾಬಾದ್" ಅಲ್ಲ "ನಾಸಿರ್ ಸಾಬ್ ಜಿಂದಾಬಾದ್" ಎಂದು ವಾದ ಮಂಡಿಸಿದ್ದ ಹಲವು ರಾಜ್ಯ ಸಚಿವರಿಗೆ ಈ ಬೆಳವಣಿಗೆ ಇಂದ ಭಾರಿ ಮುಖಭಂಗವಾದಂತಾಗಿದೆ.
ಬಂಧಿತ ಮೂವರನ್ನು ದೆಹಲಿಯ ಇಲ್ತಾಜ್, ಬೆಂಗಳೂರಿನ ಮುನಾವರ್ ಮತ್ತು ಕರ್ನಾಟಕದ ಹಾವೇರಿಯ ಮೊಹಮ್ಮದ್ ಶಫಿ ಎಂದು ಗುರುತಿಸಲಾಗಿದೆ.
ಫೆ.27ರಂದು ವಿಧಾನಸೌಧದಲ್ಲಿ ನಡೆದ ರಾಜ್ಯಸಭಾ ಚುನಾವಣೆ ವೇಳೆ ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ ಪ್ರಕರಣ ದಾಖಲಾಗಿದ್ದು, ಎಫ್‌ಎಸ್‌ಎಲ್ ವರದಿ, ಸಾಂದರ್ಭಿಕ ಸಾಕ್ಷ್ಯ, ಸಾಕ್ಷಿ ಹೇಳಿಕೆ, ಲಭ್ಯವಾದ ಸಾಕ್ಷ್ಯಾಧಾರಗಳ ನಂತರ ಮೂವರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಅವರನ್ನು ಬಂಧಿಸಲಾಗಿದೆ.ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.