ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತ್ರತ್ವದ ಐ.ಎನ್.ಡಿ.ಐ ಅಲಾಯನ್ಸ್ ಒಕ್ಕೂಟ ಗೆದ್ದರೆ ಮೇಕೆದಾಟು ಯೋಜನೆಗೆ ತಡೆ? | JANATA NEWS
ಚೆನ್ನೈ : ಲೋಕಸಭಾ ಚುನಾವಣೆಯಲ್ಲಿ ಐ.ಎನ್.ಡಿ.ಐ ಅಲಾಯನ್ಸ್ ಒಕ್ಕೂಟ ಗೆದ್ದರೆ ಮೇಕೆದಾಟು ಯೋಜನೆಗೆ ತಡೆ ಒಡ್ಡುವುದಾಗಿ ತಮಿಳುನಾಡು ಆಡಳಿತರೂಡ ಡಿಎಂಕೆ ಪಕ್ಷ ಘೋಷಣೆ ಮಾಡಿದೆ.
ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ಸಿಎಂ ಸ್ಟಾಲಿನ್ ನೇತೃತ್ವದ ಡಿಎಂಕೆ ಪಕ್ಷ ಲೋಕಸಭಾ ಚುನಾವಣೆಗೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಕಾವೇರಿ ನದಿಗೆ ಅಡ್ಡಲಾಗಿ ಕರ್ನಾಟಕ ನಿರ್ಮಿಸಲು ಉದ್ದೇಶಿಸಿರುವ ಮೇಕೆದಾಟು ಅಣೆಕಟ್ಟೆ ಯೋಜನೆ ನಿರ್ಮಾಣಕ್ಕೆ ತಡೆ ಒಡ್ಡುವುದಾಗಿ ಹೇಳಿದೆ.
ಲೋಕಸಭಾ ಚುನಾವಣೆಯಲ್ಲಿ ಐ.ಎನ್.ಡಿ.ಐ ಅಲಾಯನ್ಸ್ ನಲ್ಲಿ ಪ್ರಮುಖ ಪಕ್ಷವಾದ ಕಾಂಗ್ರೆಸ್, ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೇಕೆದಾಟು ಯೋಜನೆಯನ್ನು ಪ್ರಮುಖ ಅಸ್ತ್ರವನ್ನಾಗಿ ಬಳಸಿದ್ದು, ನಮ್ಮ ನೀರು, ನಮ್ಮ ಹಕ್ಕು ಎಂಬ ಘೋಷಣೆಯೊಂದಿಗೆ ಜನರ ಮನಃ ಗೆದ್ದಿತ್ತು. ಈಗ ತಮ್ಮ ಮಿತ್ರಪಕ್ಷವಾದ ಡಿಎಂಕೆ, ಪಕ್ಕದ ತಮಿಳುನಾಡುನಲ್ಲಿ ಕರ್ನಾಟಕದ ಯೋಜನೆ ವಿರುದ್ಧ ಚುನಾವಣೆ ಘೋಷಣೆ ಮಾಡಿದ್ದು ಕರ್ನಾಟಕ ಕಾಂಗ್ರೆಸ್ ಪಾಳಯದಲ್ಲಿ ಸಾಕಷ್ಟು ಮುಜುಗರದ ಸಂಗತಿಯಾಗಿದೆ.
ವಿರೋಧಪಕ್ಷದ ನಾಯಕ ಆರ್. ಅಶೋಕ ಅವರು ರಾಜ್ಯ ಕಾಂಗ್ರೆಸ್ ಪಕ್ಷವನ್ನು ಲೇವಡಿ ಮಾಡಿದ್ದು, "ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ಜಾರಿ ಮಾಡಲು ಬಿಡುವುದಿಲ್ಲ ಎಂದು ತಮ್ಮ I.N.D.I. ಮಿತ್ರಪಕ್ಷ ಡಿಎಂಕೆ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದೆಯಲ್ಲ ಡಿಸಿಎಂ ಡಿಕೆ.ಶಿವಕುಮಾರ ಅವರೇ, ಈಗ 'ನಮ್ಮ ನೀರು, ನಮ್ಮ ಹಕ್ಕು' ಎಂದು ತಮ್ಮ ಶಾಸಕರನ್ನು ಚೆನ್ನೈಗೆ ಕರೆದುಕೊಂಡು ಹೋಗಿ ಪ್ರತಿಭಟನೆ ಮಾಡುತ್ತೀರಾ ಅಥವಾ ರಾಹುಲ್ ಗಾಂಧಿ ಅವರನ್ನು ಮೆಚ್ಚಿಸಲು ಕನ್ನಡಿಗರ ಹಿತಾಸಕ್ತಿ ಬಲಿಕೊಟ್ಟು ರಾಜಿ ಮಾಡಿಕೊಳ್ಳುತ್ತೀರಾ? ಬೆಂಗಳೂರಿಗೆ ನೀರು ತರುತ್ತೇವೆ ಎಂದು ಮೇಕೆದಾಟು ಪಾದಯಾತ್ರೆ ಮಾಡಿ ಕನ್ನಡಿಗರ ಮೂಗಿಗೆ ತುಪ್ಪ ಸವರಿ ಅಧಿಕಾರಕ್ಕೇರಿದ ನಾಡದ್ರೋಹಿ ಕರ್ನಾಟಕ ಕಾಂಗ್ರೆಸ್ ಸರ್ಕಾರ ಈಗ ಕನ್ನಡಿಗರ ಬೆನ್ನಿಗೆ ಚೂರಿ ಹಾಕುತ್ತಿದೆ.", ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.