ಏಪ್ರಿಲ್ 3 ರಂದು ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ: ಸುಮಲತಾ ಅಂಬರೀಷ್ | JANATA NEWS
ಮಂಡ್ಯ : ಏಪ್ರಿಲ್ 3 ರಂದು ಮತ್ತೊಮ್ಮೆ ಬೆಂಬಲಿಗರೊಂದಿಗೆ ಸಭೆ ನಡೆಸಿ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸುಮಲತಾ ಅಂಬರೀಷ್ ಹೇಳಿದ್ದಾರೆ.
ಬಿಜೆಪಿಯಂತೆ ಕಾಂಗ್ರೆಸ್ನಿಂದಲೂ ಪಕ್ಷ ಸೇರ್ಪಡೆಗೆ ಆಹ್ವಾನ ಬಂದಿರುವುದು ಸತ್ಯ. ಆದರೆ ನನ್ನ ನಿರ್ಧಾರ ಆ ಪಕ್ಷಕ್ಕೋ, ಈ ಪಕ್ಷಕ್ಕೋ ಅಂತ ನೋಡಿಕೊಂಡು ಮಾಡಲ್ಲ. ಮಂಡ್ಯದ ಜನತೆ ಹಿತದೃಷ್ಟಿಯಿಂದ ತೀರ್ಮಾನ ತೆಗೆದುಕೊಳ್ಳುತ್ತೇನೆ. ಏಪ್ರಿಲ್ 3ರ ರಂದು ಮಂಡ್ಯದಲ್ಲಿಯೇ ಅಭಿಮಾನಿಗಳ ಸಮ್ಮುಖದಲ್ಲಿ ನನ್ನ ಮುಂದಿನ ರಾಜಕೀಯ ನಿರ್ಧಾರ ಪ್ರಕಟಿಸುತ್ತೇನೆ ಎಂದು ಸಂಸದೆ ಸುಮಲತಾ ಅಂಬರೀಷ್ ಸ್ಪಷ್ಟಪಡಿಸಿದ್ದಾರೆ.
ಬಿಜೆಪಿ ನನಗೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ಆಫರ್ ನೀಡಿತ್ತು, ಆದರೆ ಮಂಡ್ಯದ ಜನರೇ ನನಗೆ ಶಕ್ತಿ.ಮಂಡ್ಯ ಜನ ಯಾವುದನ್ನೂ ಲೆಕ್ಕಿಸದೆ ಅಂಬರೀಶ್ ಅವರ ಮೇಲಿಟ್ಟಿರುವ ಪ್ರೀತಿಯಿಂದ ಕಳೆದ ಚುನಾವಣೆಯಲ್ಲಿ ಪ್ರಭಾವಿಗಳ ಬೆಂಬಲವಿಲ್ಲದೆ ನಾನು ಗೆಲುವು ಸಾಧಿಸಲು ಸಾಧ್ಯವಾಯಿತು ಎಂದರು.
ಇಲ್ಲಿಯವರೆಗೆ ನಾನು ನುಡಿದಂತೆ ನಡೆದುಕೊಂಡಿದ್ದೇನೆ. ಮಂಡ್ಯಕ್ಕೆ ಕೈಲಾದಷ್ಟು ಪ್ರಾಮಾಣಿಕ ಸೇವೆ ಮಾಡಿ ಜಿಲ್ಲೆಯ ಘನತೆಯನ್ನು ಸಂಸತ್ತಿನಲ್ಲೂ ಎತ್ತಿ ಹಿಡಿದಿದ್ದೇನೆ. ಮಂಡ್ಯದೊಂದಿಗೆ ನನ್ನದು ಕೇವಲ ರಾಜಕೀಯ ಸಂಬಂಧವಲ್ಲ, ಭಾವನೆ ಮತ್ತು ಪ್ರೀತಿ ಇದೆ. ನನ್ನ ಸ್ವಾರ್ಥ ಅನ್ನವುದಾದರೆ ನನಗೆ ಮಂಡ್ಯವೇ ಬೇಕು ಎಂದರು.
ನನಗೆ ಎಲ್ಲ ಪಕ್ಷಗಳಿಂದಲೂ ಆಹ್ವಾನ ಬರುತ್ತಿದೆ, ಫೋನ್ ಕಾಲ್ ಬರುತ್ತಿದೆ ಎಂದು ಕಾಂಗ್ರೆಸ್ನಿಂದ ಪಕ್ಷ ಸೇರ್ಪಡೆ ಆಹ್ವಾನ ಇದೆ ಅಂತ ಒಪ್ಪಿಕೊಂಡ ಸುಮಲತಾ, ನಾರಾಯಣಗೌಡರಿಗೆ ಎಲ್ಲವೂ ಗೊತ್ತಿದೆ. ಎಲ್ಲ ಪ್ರಶ್ನೆಗಳಿಗೂ 3ನೇ ತಾರೀಕಿನಂದು ಉತ್ತರ ಸಿಗುತ್ತದೆ. ಏಪ್ರಿಲ್ 3ರಂದು ಯಾವಾಗ, ಎಲ್ಲಿ ಸಭೆ ಅಂತ ತಿಳಿಸುತ್ತೇವೆ. ನನ್ನ ನಿರ್ಧಾರ ಯಾವ ಪಕ್ಷಕ್ಕೆ ಅನುಕೂಲ ಆಗಲಿದೆ ಎನ್ನುವುದಕ್ಕಿಂತ, ಅಂಬಿ ಅಭಿಮಾನಿಗಳ ಭವಿಷ್ಯ ದೃಷ್ಟಿಯಲ್ಲಿರಿಸಿಕೊಂಡು ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.