ಲೋಕಸಭೆ ಚುನಾವಣೆ ನಂತರ ಕಾಂಗ್ರೆಸ್ ಇಬ್ಬಾಗವಾಗಲಿದೆ : ಬಸವರಾಜ ಬೊಮ್ಮಾಯಿ | JANATA NEWS
ಹಾವೇರಿ : ಲೋಕಸಭೆ ಚುನಾವಣೆಯ ನಂತರ ಕರ್ನಾಟಕ ಕಾಂಗ್ರೆಸ್ ವಿಭಜನೆಯಾಗಲಿದೆ. ಪಕ್ಷಕ್ಕೆ ಸೂಕ್ತ ಅಭ್ಯರ್ಥಿಗಳು ಸಿಗದ ಕಾರಣ, ಸಚಿವರ ಕುಟುಂಬದ ಸದಸ್ಯರಿಗೆ ಟಿಕೆಟ್ ನೀಡಲಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತನಾಡಿದ ಅವರು, ಮೋದಿ ಪ್ರಮಾಣ ವಚನ ಸ್ವೀಕರಿಸಿ ಮೂರು ತಿಂಗಳಲ್ಲಿ ಕಾಂಗ್ರೆಸ್ ಇಬ್ಬಾಗ ಆಗಲಿದೆ. ಅದರ ಪರಿಣಾಮ ಕರ್ನಾಟಕದ ಮೇಲೂ ಆಗಲಿದೆ ಎಂದರು.
ಕಾಂಗ್ರೆಸ್ ನಲ್ಲಿ ಮಂತ್ರಿಗಳ ಕುಟುಂಬಸ್ಥರಿಗೆ ಟಿಕೇಟ್ ನೀಡಿದ ಕುರಿತು ಕೇಳಿದ ಪ್ರಶ್ಬೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಕುಟುಂಬ ರಾಜಕಾರಣ ಮೊದಲಿನಿಂದಲೂ ಬಂದಿದೆ ಅದರಲ್ಲೇನು ಆಶ್ವರ್ಯ ಇಲ್ಲ. ಆದರೆ, ಈ ಬಾರಿ ಇಷ್ಟು ಪ್ರಮಾಣದಲ್ಲಿ ಕುಟುಂಬ ರಾಜಕೀಯ ನಡೆಯಲು ಕಾರಣ ಬೇರೆನೇ ಇದೆ. ಕಾಂಗ್ರೆಸ್ ನಲ್ಲಿ ಎಲ್ಲಾ ಮಂತ್ರಿಗಳಿಗೆ ಚುನಾವೇಯಲ್ಲಿ ಸ್ಪರ್ಧಿಸುವಂತೆ ಕಾಂಗ್ರೆಸ್ ಹೈಕಮಾಂಡ್ ನವರು ಸುಮಾರು ಹತ್ತು ಹನ್ನೆರಡು ಜನ ಮಂತ್ರಿಗಳಿಗೆ ಹೇಳಿದ್ದರು.
ಇದರಿಂದ ರಾಜಕೀಯ ಲಾಭ ಆಗಲ್ಲ. ಮೋದಿಗೆ ಮತ ಹಾಕಲು ಜನ ತೀರ್ಮಾನ ಮಾಡಿದ್ದಾರೆ. ಕಾಂಗ್ರೆಸ್ ನವರಿಗೆ ಅನುಕೂಲವಾಗದು ಎಂದು ಹೇಳಿದರು.
ಲೋಕಸಭೆ ಚುನಾವಣಾ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಬಗ್ಗೆ ನಾಳೆ ತೀರ್ಮಾನ ಮಾಡುತ್ತೇವೆ. ಒಳ್ಳೆ ಸಮಯ ನೋಡಿ ನಾಮಪತ್ರ ಸಲ್ಲಿಕೆ ಮಾಡುತ್ತೇವೆ. ಎರಡು ಸಲ ನಾಮಪತ್ರ ಸಲ್ಲಿಕೆ ಮಾಡಲಿದ್ದೇನೆ. ಒಂದು ಸಲ ವಯಕ್ತಿಕವಾಗಿ ಹಾಗೂ ಮೇಲೆ ಸಾರ್ವಜನಿಕವಾಗಿ ಒಮ್ಮೆ ನಾಮಪತ್ರ ಸಲ್ಲಿಸುತ್ತೇನೆ ಎಂದು ಹೇಳಿದರು.
ಚುನಾವಣೆ ಬಂದ್ರೆ ಸಾಕು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ಆಸ್ಪತ್ರೆ ಸೇರುತ್ತಾರೆ ಎಂಬ ಶ್ರೀರಂಗಪಟ್ಟಣ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಹೇಳಿಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ರಮೇಶ್ ಬಂಡಿಸಿದ್ದೇಗೌಡ ವೈದ್ಯರಲ್ಲ, ಆರೋಗ್ಯ ವಿಚಾರವನ್ನು ರಾಜಕೀಯಕ್ಕೆ ಎಳೆದು ತರುವುದು ಸರಿಯಲ್ಲ ಎಂದು ಹೇಳಿದರು.