ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ ಆಂದ್ರಪ್ರದೇಶದ ಶಾಸಕ | JANATA NEWS
ಅಮರಾವತಿ : ಆಂಧ್ರಪ್ರದೇಶದ ಶಾಸಕ ಅನ್ನಾಬತುನಿ ಶಿವಕುಮಾರ್ ಸರತಿ ಸಾಲಿನಲ್ಲಿ ಬಂದು ಮತ ಚಲಾಯಿಸುವಂತೆ ಕೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಜತೆಗೆ ಅವರ ಬೆಂಬಲಿಗರು ಅಮಾನುಷವಾಗಿ ಹಲ್ಲೆ ನಡೆಸಿದ್ದಾರೆ.
ತೆನಾಲಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ಆಂಧ್ರಪ್ರದೇಶ ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ಅನ್ನಾಬತುನಿ ಶಿವಕುಮಾರ್ ಸರತಿ ಸಾಲಿನಲ್ಲಿ ಬರುವಂತೆ ಹೇಳಿದ ಮತದಾರನಿಗೆ ಕಪಾಳಮೋಕ್ಷ ಮಾಡಿದ್ದಾರೆ. ಮತಗಟ್ಟೆ ಸರತಿ ಸಾಲಿನಲ್ಲಿದ್ದ ವ್ಯಕ್ತಿಯೊಬ್ಬನಿಗೆ ಕಪಾಳಮೋಕ್ಷ ಮಾಡಿದ ಸಂದರ್ಭದಲ್ಲಿ ಶಾಸಕ ವಾಗ್ವಾದ ನಡೆಸಿ ಮತ್ತೆ ಕಪಾಳಮೋಕ್ಷ ಪಡೆದಿದ್ದಾರೆ.
ಶಾಸಕ ಶಿವಕುಮಾರ್ ಮತ ಚಲಾಯಿಸಲು ಮತಗಟ್ಟೆಗೆ ತೆರಳಿದಾಗ ಅವರು ಮತ್ತು ಅವರ ಬೆಂಬಲಿಗರು ಸರತಿ ಸಾಲನ್ನು ತಪ್ಪಿಸಲು ಪ್ರಯತ್ನಿಸಿದರು. ಮತದಾರ ಗೊಟ್ಟುಮುಕ್ಕಲ ಸುಧಾಕರ್ ಅವರನ್ನು ಎದುರುಗೊಂಡು ಸರತಿ ಸಾಲಿನಲ್ಲಿ ನಿಲ್ಲುವಂತೆ ಹೇಳಿದಾಗ ಶಾಸಕರು ಕಪಾಳಮೋಕ್ಷ ಮಾಡಿದ್ದು, ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.
ಘಟನೆ ಇಷ್ಟಕ್ಕೇ ಮುಗಿಯಲಿಲ್ಲ, ನಂತರ ಶಿವಕುಮಾರ್ ಅವರ ಹಿಂಬಾಲಕರು ಸುಧಾಕರ್ ಮೇಲೆ ಹಲ್ಲೆ ನಡೆಸಿದ್ದರಿಂದ ಎಡಗಣ್ಣಿಗೆ ಗಾಯವಾಗಿದೆ. ಘರ್ಷಣೆಯ ನಂತರ, ಶಾಸಕ ಮತ್ತು ಅವರ ಬೆಂಬಲಿಗರ ವಿರುದ್ಧ ಸುಧಾಕರ್ ನೀಡಿದ ದೂರಿನ ಆಧಾರದ ಮೇಲೆ ತೆನಾಲಿ ಟು ಟೌನ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪ್ರಕರಣ ದಾಖಲಾಗಿದೆ.