ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶಿಸಬೇಕು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸರ್ಕಾರದಿಂದ ವರದಿ ಪಡೆಯಲಿ: ಬಿ. ವೈ. ವಿಜಯೇಂದ್ರ | JANATA NEWS
ಬೆಂಗಳೂರು : ಉಡುಪಿಯ ಗ್ಯಾಂಗ್ ವಾರ್ ಮತ್ತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ದಾಂಧಲೆ ಪ್ರಕರಣ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ವಿಪಕ್ಷ ನಾಯಕರು ಕಿಡಿಕಾರಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವಿನ ನಂತರ ಪೊಲೀಸ್ ಸಿಬ್ಬಂದಿ ಮೇಲೆ ನಡೆದ ಹಿಂಸಾಚಾರ ಮತ್ತು ಹಲ್ಲೆಗೆ ರಾಜ್ಯ ಕಾಂಗ್ರೆಸ್ ಪಕ್ಷವೇ ಹೊಣೆ ಎಂದಿರುವ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಮುಸ್ಲಿಂ ವೋಟ್ ಬ್ಯಾಂಕ್ ಓಲೈಕೆ ರಾಜ್ಯವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದ್ದಾರೆ.
ರಾಜ್ಯಪಾಲರು ಈ ಕೂಡಲೇ ಮಧ್ಯ ಪ್ರವೇಶಿಸಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕುರಿತು ಸರ್ಕಾರದಿಂದ ವರದಿ ಪಡೆಯಲಿ. ಅಂತೆಯೇ ಪೊಲೀಸ್ ಠಾಣೆಗಳಿಗೆ ದಾಳಿ ಮಾಡುತ್ತಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಸರಿ ದಾರಿಗೆ ಬರಲು ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಮನವಿ ಮಾಡಿದ್ದಾರೆ.
ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಪ್ರಕರಣದಲ್ಲಿ ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಆಗ್ರಹಿಸಿದ್ದಾರೆ. ರಾಜ್ಯದಲ್ಲಿ ಪೋಲೀಸರು ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಪರಿಣಾಮವಾಗಿ ರಾಜ್ಯವನ್ನು ಉಗ್ರರು ಅಡಗುತಾಣವನ್ನಾಗಿ ಮಾಡಿಕೊಂಡಿದ್ದಾರೆ. ಮಾಫಿಯಾಗಳು-ರೌಡಿಗಳ ಅಟ್ಟಹಾಸ ಮೇರೆ ಮೀರಿದೆ, ಅಕ್ರಮ ರೇವ್ ಪಾರ್ಟಿಗಳು ಎಗ್ಗಿಲ್ಲದೆ ನಡೆಯುತ್ತಿವೆ.
ಕ್ರಿಮಿನಲ್‌ಗಳನ್ನು ಬಂಧಿಸಲು ಹೊರಟರೆ ಮತೀಯ ಅಲ್ಪಸಂಖ್ಯಾತರ ಹೆಸರಿನಲ್ಲಿ ಪೋಲಿಸ್ ಠಾಣೆಗಳಿಗೆ ಬೆಂಕಿಹಾಕಲು ಈ ನೆಲದ ಕಾನೂನಿನ ಬಗ್ಗೆ ಕಿಂಚಿತ್ತು ಭಯವಿಲ್ಲದ ವಿಧ್ವಂಸಕ ಶಕ್ತಿಗಳು ಗುಂಪುಗೂಡಿ ಪೋಲಿಸ್ ಠಾಣೆಗಳಿಗೇ ದಾಳಿ ಮಾಡಿ ಬೆಂಕಿ ಹಚ್ಚಲು ಮುಂದಾಗುತ್ತಿವೆ. ಇದಕ್ಕೆಲ್ಲ ರಾಜ್ಯವಾಳುತ್ತಿರುವ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದೆ. ಮುಸ್ಲಿಂ ಮತ ಓಲೈಕೆ ಈ ರಾಜ್ಯವನ್ನು ಅರಾಜಕತೆಯತ್ತ ಕೊಂಡೊಯ್ಯುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಹಾರದಲ್ಲಿ ಲಲ್ಲುಪ್ರಸಾದ್ ಯಾದವ್ ಆಡಳಿತ ನಡೆಸಿದ ದಿನಗಳು ಕರ್ನಾಟಕದಲ್ಲಿ ಮತ್ತೆ ತಲೆ ಎತ್ತುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. 'ಸರ್ವ ಜನಾಂಗದ ಶಾಂತಿಯ ತೋಟ'ಎಂದು ಕರೆದ ಕುವೆಂಪು ಕಲ್ಪನೆಯನ್ನು ಕೊಲ್ಲಲು ಹೊರಟಿರುವ ಕಾಂಗ್ರೆಸ್ ಸರ್ಕಾರ ಕರುನಾಡನ್ನು ಅಭದ್ರತೆಯ ಅಶಾಂತಿಯ ಕೊಂಪೆ ಮಾಡಲು ಹೊರಟಿದೆ. ಪೊಲೀಸರ ನೈತಿಕ ಶಕ್ತಿ ಸಂಪೂರ್ಣವಾಗಿ ಕುಗ್ಗಿಸುವ ವ್ಯವಸ್ಥೆಯ ಜಾಲ ಕೆಲಸ ಮಾಡುತ್ತಿದೆ ಎಂದಿದ್ದಾರೆ.