ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಿಢೀರ್ ಏರಿಸಿದ ರಾಜ್ಯ ಕಾಂಗ್ರೆಸ್ ಸರ್ಕಾರ : ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ ಬಿಜೆಪಿ | JANATA NEWS

ಬೆಂಗಳೂರು : ರಾಜ್ಯ ಸರ್ಕಾರವು 29.84% ಮತ್ತು 18.44% ರಷ್ಟು ಮಾರಾಟ ತೆರಿಗೆಯನ್ನು ಪರಿಷ್ಕರಿಸಿದ ಕಾರಣ ಕರ್ನಾಟಕದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಹೆಚ್ಚಾಗುವ ಸಾಧ್ಯತೆಯಿದ್ದು, ಕ್ರಮವಾಗಿ 3 ಮತ್ತು ರೂ 3.05 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಆಕ್ರೋಶ ವ್ಯಕ್ತವಾಗಿದ್ದು, ವಿರೋಧ ಪಕ್ಷ ಬಿಜೆಪಿ ರಾಜ್ಯ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡಿದೆ.
ಎಕ್ಸ್ ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಬಿಜೆಪಿ, "ಕನ್ನಡಿಗರಿಗೆ ಪದೇ ಪದೇ ಬೆಲೆ ಏರಿಕೆಯ ಬರೆ ಹಾಕುವುದೇ ಕರ್ನಾಟಕ ಕಾಂಗ್ರೆಸ್ ಸರ್ಕಾರದ ಅಸಲಿ ಕರ್ನಾಟಕ ಮಾಡೆಲ್!!"
"ಪೆಟ್ರೋಲ್ ಬೆಲೆ ಪ್ರತಿ ಲೀ. ಗೆ ₹3 ಹಾಗೂ ಡಿಸೇಲ್ ಬೆಲೆ ಪ್ರತಿ ಲೀ.ಗೆ ₹3.50 ಯನ್ನು ಏಕಾಏಕಿ ಹೆಚ್ಚಿಸಿದೆ ರಾಜ್ಯ ಕಾಂಗ್ರೆಸ್ ಸರ್ಕಾರ."
"ಸಿಎಂ ಸಿದ್ದರಾಮಯ್ಯ ಅವರೇ, ಪೆಟ್ರೋಲಿಯಂ ಕಚ್ಚಾತೈಲದ ಬೆಲೆಯಲ್ಲಿ ಯಾವುದೇ ವ್ಯತ್ಯಾಸವಾಗಿಲ್ಲ, ಮೇಲಾಗಿ ನೀವೇ ಹೇಳಿದಂತೆ ಸರ್ಕಾರದ ಬೊಕ್ಕಸ ತುಂಬಿ ತುಳುಕುತ್ತಿದೆ, ಕರ್ನಾಟಕ ದಿವಾಳಿ ಸಹ ಆಗಿಲ್ಲ, ಅಂದ ಮೇಲೆ ದಿಢೀರ್ ಅಂತ ಈ ಬೆಲೆಯೇರಿಕೆ ಯಾವ ಪುರುಷಾರ್ಥಕ್ಕೆ..??"
"ನಿಮಗೆ ನಿಜಕ್ಕೂ ಬಡವರ ಮೇಲೆ ಕಾಳಜಿ ಇದ್ದರೆ, ಕೂಡಲೇ ಬೆಲೆ ಏರಿಕೆ ಆದೇಶವನ್ನು ಹಿಂಪಡೆಯಿರಿ, ಇಲ್ಲವಾದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಎದುರಿಸಲು ಸಿದ್ದವಾಗಿ.", ಎಂದು ರಾಜ್ಯ ಬಿಜೆಪಿ ಎಚ್ಚರಿಸಿದೆ.
ಕರ್ನಾಟಕ ಬಿಜೆಪಿ ಮುಖಂಡ ಬಿ.ವೈ.ವಿಜಯೇಂದ್ರ ಮಾತನಾಡಿ, "ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ನಿರ್ಧಾರವನ್ನು ಸಿಎಂ ಮತ್ತು ಸರ್ಕಾರ ಹಿಂಪಡೆಯದಿದ್ದರೆ ಸೋಮವಾರ ರಾಜ್ಯಾದ್ಯಂತ ಎಲ್ಲಾ ಜಿಲ್ಲಾ ಕೇಂದ್ರಗಳು ಮತ್ತು ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ. ಇಂಧನ ಬೆಲೆ ಏರಿಕೆ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ ನಾನು ಅವರನ್ನು ಒತ್ತಾಯಿಸುತ್ತೇನೆ.", ಎಂದು ಹೇಳಿದ್ದಾರೆ.