ರೇಣುಕಾಸ್ವಾಮಿ ಹತ್ಯೆ ಕೇಸ್ ನ ಪೋಸ್ಟ್ ಮಾರ್ಟಮ್ ವರದಿ, ಆಘಾತ, ಮೆದುಳು ರಕ್ತಸ್ರಾವದಿಂದ ಸ್ವಾಮಿ ಸಾವು! | JANATA NEWS
ಬೆಂಗಳೂರು : ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಮತ್ತು ಗೆಳತಿ ಪವಿತ್ರಾ ಗೌಡ ಅರೆಸ್ಟ್ ಆಗಿರುವ ಸುದ್ದಿ ರಾಜ್ಯದೆಲ್ಲೆಡೆ ಭಾರಿ ಚರ್ಚೆಯಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರಬಲ ಸಾಕ್ಷಿಯಾದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ದರ್ಶನ್ ಹಾಗೂ ಪವಿತ್ರ ಗೌಡ ಅವರನ್ನು ಬಂಧಿಸಲಾಗಿದ್ದು, ರಘು ಮತ್ತು ಆತನ ತಂಡ ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿದ ಬಳಿಕ ಬೆಂಗಳೂರಿಗೆ ಕರೆತಂದು ಪಟ್ಟಣಗೆರೆ ಶೆಡ್ಗೆ ಕರೆದೊಯ್ದ ನಂತರ ಶೆಡ್ನಲ್ಲಿ ದರ್ಶನ್ ಮತ್ತು ಆತನ ತಂಡ ಹಲ್ಲೆ ನಡೆಸಿರುವ ದೃಶ್ಯ ಶೆಡ್ನ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದರ್ಶನ್ ಮತ್ತು ಪವಿತ್ರಾ ಗೌಡ ಅವರು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿರುವುದಕ್ಕೆ ಸಂಬಂಧಿಸಿದಂತೆ ಪ್ರಬಲ ಸಾಕ್ಷ್ಯಾಧಾರಗಳು ಸಿಕ್ಕಿವೆ ಎನ್ನಲಾಗಿದೆ. ರೇಣುಕಾಸ್ವಾಮಿ ಸಾವಿಗೆ ಸ್ಫೋಟಕ ಕಾರಣ ಕೊಟ್ಟಿರುವ ವೈದ್ಯರ ವರದಿಯ ಬಗ್ಗೆ ಮಾಹಿತಿ ಲಭ್ಯವಾಗಿದೆ.
ರೇಣುಕಾಸ್ವಾಮಿ ಪೋಸ್ಟ್ ಮಾರ್ಟಂ ನಡೆಸಿದ್ದ ವೈದ್ಯರು ಸದ್ಯ ವರದಿಯನ್ನು ಪೊಲೀಸರಿಗೆ ಸಲ್ಲಿಸಿದ್ದಾರೆ. ಈ ವರದಿಗಳಲ್ಲಿ ವೈದ್ಯರು ನೀಡಿರುವ ಮಾಹಿತಿ ಆಧಾರದ ಮೇಲೆ ರೇಣುಕಾಸ್ವಾಮಿಗೆ ವಿದ್ಯುತ್ ಶಾಕ್ ನೀಡಿದ್ದರಿಂದ ಹಾಗೂ ಬಲವಾಗಿ ಹೊಡೆತ ಬಿದ್ದಿದ್ದರಿಂದ ತೀವ್ರ ತೆರನಾದ ರಕ್ತಸ್ರಾವವಾಗಿದ್ದು, ಮೂಳೆಗಳೂ ಕೂಡ ಮುರಿದಿದ್ದವು. ಇದರಿಂದಲೇ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ರೇಣುಕಾಸ್ವಾಮಿ ಆಘಾತ ಮತ್ತು ಮೆದುಳಿನ ತೀವ್ರ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ರೇಣುಕಾಸ್ವಾಮಿ ದೇಹದ 32 ಕಡೆ ಗಾಯದ ಗುರುತುಗಳು ಪತ್ತೆಯಾಗಿವೆ. ತಲೆ ಬುರುಡೆಯಲ್ಲಿ 7ಕ್ಕೂ ಹೆಚ್ಚು ಗಾಯದ ಗುರುತುಗಳಿವೆ. ಮರ್ಮಾಂಗದಲ್ಲಿ ತೀವ್ರ ರಕ್ತಸ್ರಾವವಾಗಿರುವ ಭಯಾನಕ ಅಂಶ ಪೋಸ್ಟ್ ಮಾರ್ಟಂ ರಿಪೋರ್ಟ್‍ನಲ್ಲಿ ಬಹಿರಂಗವಾಗಿದೆ ಎನ್ನಲಾಗಿದೆ.