ಸಿಎಂ ಕುರ್ಚಿ ಹಗ್ಗ ಜಗ್ಗಾಟ ಗಲಾಟೆ : ಕಾಂಗ್ರೆಸ್ ಹೈಕಮಾಂಡ್ ಗೆ ಮತ್ತೊಮ್ಮೆ ತಲೆನೋವು? | JANATA NEWS

ನವದೆಹಲಿ : ಕರ್ನಾಟಕದ ಸಿಎಂ ಕುರ್ಚಿ ಹಗ್ಗ ಜಗ್ಗಾಟ ಗಲಾಟೆಯನ್ನು ನಿಭಾಯಿಸುವುದು ಕಾಂಗ್ರೆಸ್ ಹೈಕಮಾಂಡ್ ಗೆ ಮತ್ತೊಮ್ಮೆ ತಲೆನೋವು ಆಗಿ ಪರಿಣಮಿಸಿದೆ, ಕರ್ನಾಟಕ ಕಾಂಗ್ರೆಸ್ ಪಕ್ಷದ ಮುಖಂಡರ ಆಂತರಿಕ ಕಲಹವನ್ನು ಪರಿಹರಿಸಲು ವಿಫಲರಾಗಿದ್ದಾರೆ ಎಂದು ಟೀಕಾಕಾರರು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಡುವಿನ ಹಗ್ಗಜಗ್ಗಾಟ ಇಲ್ಲಿಯವರೆಗೂ ನೆರಳಿನಲ್ಲಿದ್ದು, ಇತ್ತೀಚೆಗೆ ಬಯಲಿಗೆ ಬರುವ ಭೀತಿ ಹೈಕಮಾಂಡ್ ಗೆ ಇದೆ ಎನ್ನಲಾಗಿದೆ.
ಲೋಕಸಭೆ ಚುನಾವಣೆ ಬಳಿಕ, ಸಿದ್ದರಾಮಯ್ಯ ಅವರಿಗೆ ನಿಕಟವಾಗಿರುವವರು ಈಗ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳಿಗೆ ಬೇಡಿಕೆ ಇಡುತ್ತಿದ್ದು, ಇದು ರಾಜ್ಯ ಸರ್ಕಾರದಲ್ಲಿ ಡಿಕೆ.ಶಿವಕುಮಾರ ಅವರ ಪ್ರಭಾವವನ್ನು ತಡೆಯುವ ಪ್ರಯತ್ನ ಎಂದು ಹೇಳಲಾಗಿದೆ.
ಸರ್ಕಾರದ ಐದು ವರ್ಷಗಳ ಅವಧಿಯ ಮಧ್ಯದಲ್ಲಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನವನ್ನು ಬಿಟ್ಟುಕೊಡುತ್ತಾರೆ ಎಂಬ ಭರವಸೆಯಲ್ಲಿ ಶಿವಕುಮಾರ್ ಇದ್ದರು, ಆದರೆ ಸಿದ್ದರಾಮಯ್ಯ ಅವರು ಕೆಳಗಿಳಿಯುವ ಬಗ್ಗೆ ಯಾವುದೇ ಒಲವನ್ನು ತೋರಿಸಿಲ್ಲ, ಎಂದು ಹೇಳಲಾಗುತ್ತಿದೆ.
ಈ ಕುರಿತು ಸಿದ್ದರಾಮಯ್ಯ ಅವರು ಅಥವಾ ಡಿಕೆ.ಶಿವಕುಮಾರ ಅವರು ಸಾರ್ವಜನಿಕವಾಗಿ ಹೆಚ್ಚಾಗಿ ಹೇಳಿಕೆ ನೀಡದಿದ್ದರೂ, ಇಬ್ಬರ ಬೆಂಬಲಿಗರು ಪದೇಪದೇ ಮುಖ್ಯಮಂತ್ರಿ, ಹೆಚ್ಚುವರಿ ಉಪ ಮುಖ್ಯಮಂತ್ರಿ ಸ್ಥಾನಗಳ ಬೇಡಿಕೆಯೊಂದಿಗೆ ಚರ್ಚೆಯನ್ನು ಚಾಲ್ತಿಯಲ್ಲಿರುವಂತೆ ಮಾಡಿದ್ದಾರೆ.
ಕಳೆದ ವರ್ಷ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿದ ನಂತರ ಭುಗಿಲೆದ್ದ ಸಿಎಂ ಸ್ಥಾನದ ಜಗಳದ ಹೈಕಮಾಂಡ್ ಬಳಿ ಹೋಗಿದ್ದು, ಅರ್ಧ ಅವಧಿ ಸೂತ್ರದೊಂದಿಗೆ ಡಿಕೆ.ಶಿವಕುಮಾರ ಅವರನ್ನು ಉಪ ಮುಖ್ಯಮಂತ್ರಿ ಸ್ಥಾನಕ್ಕೆ ಸಮಾಧಾನಪಡಿಸಲಾಗಿತು, ಎಂದು ಹೇಳಲಾಗುತ್ತದೆ.