ನೀವು ಸುಳ್ಳು ಹೇಳುತ್ತಿದ್ದೀರಿ, ಸರ್ಕಾರ ರೈತರಿಂದ ಎಂಎಸ್‌ಪಿ ದರದಲ್ಲಿ ಖರೀದಿಸುತ್ತಿದೆ - ರಾಹುಲ್ ಗಾಂಧಿಗೆ ತರಾಟೆ ತೆಗೆದುಕೊಂಡ ಕೃಷಿ ಮಂತ್ರಿ | JANATA NEWS
ನವದೆಹಲಿ : ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ವೇಳೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಹುಲ್ ಗಾಂಧಿ ಅಗ್ನಿವೀರದಿಂದ ರೈತರ ಸಮಸ್ಯೆಯವರೆಗೂ ಸರ್ಕಾರವನ್ನು ಗುರಿ ಮಾಡಿದ್ದಾರೆ. ಈ ವೇಳೆ ರೈತರ ಬಗ್ಗೆ ಕೂಡ ಮಾತನಾಡಿದರು. ಸರಕಾರ ರೈತರನ್ನು ಭಯೋತ್ಪಾದಕರು ಎಂದು ಕರೆಯುತ್ತಿದೆ ಎಂದು ಆರೋಪಿಸಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಗೃಹ ಸಚಿವರು, ಈ ರೀತಿಯ ಅಳತೆಯಿಲ್ಲದ ಹೇಳಿಕೆ ಇಲ್ಲಿ ನಡೆಯಬಾರದು ಎಂದು ಸ್ಪೀಕರ್‌ಗೆ ದೂರು ನೀಡಿದ್ದಾರೆ.
ಇದಾದ ಬಳಿಕ ಮಾತನಾಡಿದ ರಾಹುಲ್ ಗಾಂಧಿ, ರೈತರು ಎಂಎಸ್‌ಪಿಗೆ ಬೇಡಿಕೆ ಇಡುತ್ತಿದ್ದಾರೆ ಆದರೆ ಸರ್ಕಾರ ನೀಡುತ್ತಿಲ್ಲ, ಎಂದು ಆರೋಪಿಸಿದ್ದಾರೆ. ಇದಕ್ಕೆ ಉತ್ತರವಾಗಿ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿ, "ಇದು ಸಂಪೂರ್ಣ ತಪ್ಪು ಹೇಳಿಕೆ", ಎಂದಿದ್ದಾರೆ. ಅಲ್ಲದೇ, "ಆರೋಪ ಮಾಡುವುದಾದರೆ ಪರಿಶೀಲಿಸಿಕೊಳ್ಳಿ" ಎಂದು ಆಕ್ರೋಶದಿಂದ ಹೇಳಿದ್ದಾರೆ.
ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಮಾತನಾಡಿ, "ಅವರು ಸದನದಲ್ಲಿ ತಪ್ಪು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದು ತಪ್ಪು ನಿರೂಪಣೆಯಾಗಿದೆ." ಎಂದು ಹೇಳಿದ್ದಾರೆ. ಅಲ್ಲದೇ, "ರಾಹುಲ್ ಗಾಂಧಿ ಏನು ಹೇಳುತ್ತಿದ್ದಾರೆ ಎಂಬುದನ್ನು ಪರಿಶೀಲಿಸಿ", ಎಂದು ಒತ್ತಾಯಿಸಿದ್ದಾರೆ.
ಸದನದಲ್ಲಿ ರಾಹುಲ್ ಗಾಂಧಿ ಆರೋಪದ ಬಗ್ಗೆ ಶಿವರಾಜ್ ಸಿಂಗ್ ಚೌಹಾಣ್ ಆಕ್ರೋಶ ವ್ಯಕ್ತಪಡಿಸಿದ್ದು, "ನೀವು ಸುಳ್ಳು ಹೇಳುತ್ತಿದ್ದೀರಿ, ಸರ್ಕಾರ ರೈತರಿಂದ ಎಂಎಸ್‌ಪಿ ದರದಲ್ಲಿ ಖರೀದಿಸುತ್ತಿದೆ" ಎಂದು ಹೇಳಿದರು. ಈಗ 14 ಖಾರಿಫ್ ಬೆಳೆಗಳ ದರ ನಿಗದಿ ಮಾಡಿದ್ದೇವೆ. ಅವರು ಸರ್ಕಾರದಲ್ಲಿದ್ದಾಗ ಎಷ್ಟು ಬೆಳೆಗಳಿಗೆ ಎಂಎಸ್‌ಪಿ ಲಭ್ಯವಿತ್ತು ಹೇಳಿ? ಆಗ ಸಂಗ್ರಹಣೆ ಕೂಡ ಆಗಿರಲಿಲ್ಲ," ಎಂದು ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ಆ ಸಮಯದಲ್ಲಿ ಎಷ್ಟು ಖರೀದಿ ಮಾಡಲಾಗಿದೆ? ಎಂದು ಶಿವರಾಜ್ ಸಿಂಗ್ ಚೌಹಾಣ್ ಕೇಳಿದರು. ಅಲ್ಲದೇ, "ಇಂದಿಗೂ ಸಹ, ಎಂಎಸ್‌ಪಿ ದರದಲ್ಲಿ ಬೆಳೆಗಳ ಸಂಗ್ರಹಣೆ ಮುಂದುವರೆದಿದೆ", ಎಂದು ಸದನಕ್ಕೆ ಕೃಷಿ ಸಚಿವರು ತಿಳಿಸಿದ್ದಾರೆ.