ಮುಡಾ ಹಗರಣದಿಂದ ಸಿದ್ದರಾಮಯ್ಯರನ್ನು ರಕ್ಷಣೆ ಮಾಡಲು ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿದೆ - ಡಾ.ಅಶ್ವತನಾರಾಯಣ | JANATA NEWS
ಮೈಸೂರು : ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಕಾಂಗ್ರೆಸ್ ಸರ್ಕಾರದ ಹಗರಣದ ವಿರುದ್ಧ ಬಿಜೆಪಿ ಧ್ವನಿಯೆತ್ತಿದ್ದು, ಹೋರಾಟ ಹತ್ತಿಕ್ಕುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. ಪ್ರತಿಭಟಿಸುವ ಬಿಜೆಪಿ ಕಾರ್ಯಕರ್ತರನ್ನು ಮುಡಾ ಕಚೇರಿ ಬಳಿಯೇ ಬಂಧಿಸಬಹುದಿತ್ತು. ಆದರೆ, ಬೆಂಗಳೂರಿನಲ್ಲಿ ಬಂಧಿಸಿದ್ಯಾಕೆ? ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯದ ಸರ್ಕಾರದ ಬಹುಕೋಟಿ ಹಗರಣ ಖಂಡಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಂದ ಹೊರಟಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈವಿಜಯೆಂದ್ರ ಅವರನ್ನು ಇತರೆ ಮುಖಂಡರೊಂದಿಗೆ ರಾಜ್ಯ ಪೊಲೀಸರು ಬೆಂಗಳೂರಿನ ಕೆಂಗೇರಿ ಬಳಿ ಬಂಧಿಸಿದ್ದಾರೆ.
ಪ್ರತಿಭಟನಾ ನಿರತ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಮಾರ್ಗದ ಮಧ್ಯೆ ಬಂಧಿಸಲಾಗುತ್ತಿದೆ ಎಂಬ ವಿಷಯವನ್ನು ತಿಳಿದು, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಹಾಗೂ ಮಾಜಿ ಡಿಸಿಎಂ ಹಾಗೂ ಬಿಜೆಪಿ ಮುಖಂಡ ಡಾ. ಅಶ್ವತನಾರಾಯಣ ಜತೆಗೂಡಿ ಬೆಂಗಳೂರಿನಿಂದ ಟಾಟಾ ಏಸ್ ಮೂಲಕ ಮೈಸೂರಿಗೆ ತೆರಳಿ ಪ್ರತಿಭಟನೆ ನಡೆಸಿದ್ದಾರೆ.
"ಮುಡಾ ಹಗರಣದಿಂದ ಸಿಎಂ ಸಿದ್ದರಾಮಯ್ಯ ಅವರನ್ನು ರಕ್ಷಣೆ ಮಾಡಲು ರಾಜ್ಯದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರಲಾಗಿದೆ. ಪ್ರತಿಭಟನಾ ನಿರತ ಬಿಜೆಪಿ ನಾಯಕರು, ಕಾರ್ಯಕರ್ತರನ್ನು ಅಕ್ರಮವಾಗಿ ಬಂಧಿಸಲಾಗುತ್ತಿದೆ. ಈ ವಿಷಯವನ್ನು ತಿಳಿದು, ಮಾನ್ಯ ವಿರೋಧ ಪಕ್ಷದ ನಾಯಕರಾದ
ಶ್ರೀ ಆರ್.ಅಶೋಕ್ ಜತೆಗೂಡಿ ಬೆಂಗಳೂರಿನಿಂದ ಟಾಟಾ ಏಸ್ ಮೂಲಕ ಮೈಸೂರಿಗೆ ತೆರಳಿ ಪ್ರತಿಭಟನೆ ನಡೆಸಲಾಯಿತು. ಸ್ವಾತಂತ್ರ್ಯಾ ಪೂರ್ವದಲ್ಲಿ ಬ್ರಿಟಿಷರ ದಬ್ಬಾಳಿಕೆಯ ವಿರುದ್ಧ ಈ ರೀತಿ ಹೋರಾಟ ನಡೆಸುವ ಪರಿಸ್ಥಿತಿ ಇತ್ತು. ಆದರೆ, ಸರ್ವಾಧಿಕಾರಿ ಕಾಂಗ್ರೆಸ್ ಸರ್ಕಾರ ಅಂತಹದ್ದೇ ರೀತಿಯ ವಾತಾವರಣವನ್ನು ಮರುಸೃಷ್ಟಿ ಮಾಡಿದೆ. ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಧ್ವನಿ ಎತ್ತುವವರನ್ನು ತಡೆಯಲು ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡರೆ ಸಾಮೂಹಿಕವಾಗಿ ಜೈಲ್ ಭರೋ ಚಳುವಳಿ ಮಾಡಬೇಕಾಗುತ್ತದೆ ಎಚ್ಚರ! ಮುಡಾ ಹಗರಣದಿಂದ ನುಣುಚಿಕೊಳ್ಳಲು ಯತ್ನಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿ, ತಕ್ಷಣ ರಾಜಿನಾಮೆ ನೀಡಬೇಕು. ಮುಡಾ, ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರಕ್ಕೆ ತಾರ್ಕಿಕ ಅಂತ್ಯ ಸಿಗುವವರೆಗೂ ನಮ್ಮ ಹೋರಾಟ ನಿಲ್ಲದು.", ಎಂದು ಡಾ.ಅಶ್ವತನಾರಾಯಣ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.