ಅಕ್ರಮ ಆಸ್ತಿ ಪ್ರಕರಣವನ್ನು ರದ್ದುಗೊಳಿಸುವಂತೆ ಡಿಕೆ.ಶಿವಕುಮಾರ್ ಸಲ್ಲಿಸಿದ್ದ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್ | JANATA NEWS
ಬೆಂಗಳೂರು : ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ಸಿಬಿಐ ದಾಖಲಿಸಿರುವ ಅಕ್ರಮ ಆಸ್ತಿ ಪ್ರಕರಣವನ್ನು ರದ್ದುಗೊಳಿಸುವಂತೆ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಸಂಪೂರ್ಣ ಪ್ರಕರಣ ರಾಜಕೀಯ ಪ್ರೇರಿತ ಎಂದು ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಹಿನ್ನಡೆಯಾದಂತಾಗಿದೆ.
ಡಿಕೆ ಶಿವಕುಮಾರ್ ಪರ ವಕೀಲರು ಸಿಬಿಐ ದಾಖಲಿಸಿರುವ ಎಫ್‌ಐಆರ್ ಅಕ್ರಮ ಮತ್ತು ರಾಜಕೀಯ ಪ್ರೇರಿತ ಎಂದು ವಾದಿಸಿದರು. ಸಿಬಿಐ ತನ್ನ ಎಫ್‌ಐಆರ್‌ನಲ್ಲಿ ಸೆಪ್ಟೆಂಬರ್ 2020 ರಲ್ಲಿ ದಾಖಲಿಸಿದ ಆರೋಪದಲ್ಲಿ ಡಿಕೆ. ಶಿವಕುಮಾರ್ ಅವರು 2013-2018 ರ ನಡುವೆ ತಮ್ಮ ತಿಳಿದಿರುವ ಆದಾಯದ ಮೂಲಗಳಿಗೆ ಅನುಗುಣಕ್ಕೂ ಮೀರಿ ಆಸ್ತಿಯನ್ನು ಗಳಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಐಟಿ, ಇಡಿ & ಸಿಬಿಐ ಸಂಗ್ರಹಿಸಿದ ಬೃಹತ್ ದಾಖಲೆಗಳನ್ನು ಸುಪ್ರೀಂ ಕೋರ್ಟ್ ಗಮನಿಸಿದ್ದು, ಡಿಕೆ.ಶಿವಕುಮಾರ್ ಅವರ ಮನವಿಯನ್ನು ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಡಿಸಿಎಂ ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಶೆಹಜಾದ್ ಪೂನವಾಲಾ, "ಅಕ್ರಮ ಆಸ್ತಿ ಪ್ರಕರಣವನ್ನು ರದ್ದುಗೊಳಿಸುವಂತೆ ಡಿಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಇದು ಭ್ರಷ್ಟ ಕಾಂಗ್ರೆಸ್‌ಗೆ ದೊಡ್ಡ ಹಿನ್ನಡೆಯಾಗಿದೆ. ಐಎನ್.ಸಿ ಎಂದರೆ ಇನ್ನು ಇಂಡಿಯನ್ ನೇಷನಲ್ ಕಾಂಗ್ರೆಸ್ ಎಂದಲ್ಲ ಬದಲಿಗೆ ಐ ನೀಡ್ ಕರಪಶನ್ ಆಗಿದೆ. ಕಾಂಗ್ರೆಸ್ ಮಾಡಿರುವ ಭ್ರಷ್ಟಾಚಾರಗಳು ಎಲ್ಲೆಂದರಲ್ಲಿ ಬಯಲಾಗುತ್ತಿವೆ... ಯಾವುದೇ ತೀರ್ಪು ತಮ್ಮ ಪರವಾಗಿ ಬಂದರೆ ನ್ಯಾಯಾಂಗವನ್ನು ಹೊಗಳುತ್ತಾರೆ, ಇಲ್ಲದಿದ್ದರೆ ನಮ್ಮ ಪ್ರಜಾಪ್ರಭುತ್ವವನ್ನು ಮತ್ತು ನಮ್ಮ ವ್ಯವಸ್ಥೆ ದುರುಪಯೋಗ ಪಡಿಸಿಕೊಳ್ಳುವುದನ್ನು ಬಿಡುವುದಿಲ್ಲ.... ಇಂಡಿ ಮೈತ್ರಿಯು ಅಪರಾಧಿ ಭ್ರಷ್ಟ ಮುಖಗಳಿಂದ ತುಂಬಿದೆ... ಅವರ ಹೆಚ್ಚಿನ ನಾಯಕರು ಜಾಮೀನಿನ ಮೇಲೆ ಹೊರಗಿದ್ದಾರೆ ಮತ್ತು ಕೆಲವರಿಗೆ ಜಾಮೀನು ಕೂಡ ಸಿಕ್ಕಿಲ್ಲ... ಎಷ್ಟು ದಿನ ಅವರು ತಮ್ಮ ಅಪರಾಧಗಳನ್ನು ಮರೆಮಾಡಲು ಬಲಿಪಶು ಕಾರ್ಡ್ ಅನ್ನು ಆಡುತ್ತಾರೆ?. ..ಡಿಕೆ ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದಲ್ಲಿ ಸಿಬಿಐ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿರುವುದನ್ನು ಸಿಎಂ ಸಿದ್ದರಾಮಯ್ಯ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು.", ಎಂದು ಹೇಳಿದರು.