ಸಂಸತ್ ಹೊಸ್ತಿಲಲ್ಲಿ ರಾಹುಲ್ ಗಾಂಧಿಯಿಂದ ನೂಕಾಟದಲ್ಲಿ 2 ಬಿಜೆಪಿ ಸಂಸದರಿಗೆ ಗಾಯ : ಪೊಲೀಸ್ ದೂರು | JANATA NEWS
ನವದೆಹಲಿ : ಸಂಸತ್ ಎದುರು ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿ ಸಂಸದರು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭದಲ್ಲಿ ನೂಕಾಟ ನಡೆದಿದ್ದು ಪರಿಣಾಮ ಕೆಲವು ಸಂಸದರು ಗಾಯಗೊಂಡ ಘಟನೆ ನಡೆದಿದೆ.
ಭಾರತೀಯ ಜನತಾ ಪಕ್ಷದ(ಬಿಜೆಪಿ) ಸಂಸದ ಪ್ರತಾಪ್ ಸಾರಂಗಿ ಗಂಭೀರವಾಗಿ ತಲೆಗೆ ಗಾಯವಾಗಿದ್ದು, "ರಾಹುಲ್ ಗಾಂಧಿ ತಳ್ಳಿದ್ದರಿಂದ ನಾನು ಬಿದ್ದು ಗಾಯವಾಗಿದೆ", ಎಂದು ಬಿಜೆಪಿ ಸಂಸದ ಸಾರಂಗಿ ಹೇಳಿದ್ದಾರೆ.
"ನಾನು ಸಂಸತ್ ಎದುರು ನಿಂತಿದ್ದೆ. ಈ ವೇಳೆ ರಾಹುಲ್ ಗಾಂಧಿ ಸಂಸದರೊಬ್ಬರನ್ನು ತಳ್ಳಿದ್ದಾರೆ. ಆ ಸಂಸದ ನನ್ನ ಮೇಲೆ ಬಿದ್ದಿದ್ದರಿಂದ ನಾನು ಉರುಳಿಬಿದ್ದೆ" ಎಂದು ಸಾರಂಗಿ ತಿಳಿಸಿದ್ದಾರೆ.
ಈ ಘಟನೆಯಲ್ಲಿ ತಲೆಗೆ ಗಂಭೀರವಾಗಿ ಗಾಯವಾಗಿ ರಕ್ತ ಸುರಿಯಲು ಆರಂಭಿಸಿದೆ. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಬೆಂಗಳೂರು ಗ್ರಾಮಾಂತರ ಸಂಸದರು ಹಾಗೂ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿಎನ್ ಮಂಜುನಾಥ್ ಅವರಿಗೆ ಪ್ರಥಮ ಚಿಕಿತ್ಸೆ ನೀಡಿದರು ಎನ್ನಲಾಗಿದೆ.
ಇದರಿಂದ ಆಕ್ರೋಶಗೊಂಡ ಬಿಜೆಪಿ ಸಂಸದರು, "ರಾಹುಲ್ ಗಾಂಧಿ, ನಿಮಗೆ ನಾಚಿಕೆ ಆಗುವುದಿಲ್ಲವೇ? ಗುಂಡಾ ವರ್ತನೆ ಮಾಡುತ್ತಿರಾ ನೀವು?" ಎಂದು ರಾಹುಲ್ ಗಾಂಧಿ ಅವರನ್ನು ತರಾಟೆ ತೆಗೆದುಕೊಂಡಿದ್ದಾರೆ.
ಇದೆಲ್ಲವೂ ವಿಡಿಯೋ ಒಂದರಲ್ಲಿ ರೆಕಾರ್ಡ್ ಆಗಿದ್ದು, ಪ್ರತಾಪ್ ಸಾರಂಗಿ ಚಿಕಿತ್ಸೆ ಪಡೆಯುತ್ತಿದ್ದ ಸ್ಥಳಕ್ಕೆ ರಾಹುಲ್ ಗಾಂಧಿ ಬಂದಿದ್ದು ಕಂಡು ಬಂದಿದ್ದರೂ, ಸಾರಂಗಿ ಅವರಿಗೆ ಏನ್ ಆಯ್ತು ಎಂದು ವಿಚಾರಿಸಲೂ ಕೂಡ ರಾಹುಲ್ ಗಾಂಧಿ ಮನಸ್ಸು ಮಾಡಿಲ್ಲ.
ಇನ್ನು ಪ್ರತಾಪ್ ಸಾರಂಗಿ ಆರೋಪದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, "ಹೌದು, ಹೌದು, ಆಗಿದೆ, ಸರಿ ಇದೆ. ಸರಿ ಇದೆ. ಆದರೆ, ತಳ್ಳುವುದರಿಂದ ಏನೂ ಆಗೋದಿಲ್ಲ. ನಾನು ಸಂಸತ್ತಿನ ಒಳಗೆ ಹೋಗಲು ಬಯಸಿದ್ದೆ. ಸಂಸತ್ತಿಗೆ ಹೋಗುವುದು ನನ್ನ ಹಕ್ಕು, ತಡೆಯುವ ಪ್ರಯತ್ನ ನಡೆದಿದೆ," ಎಂದು ಹೇಳಿದ್ದಾರೆ.