ಮರುಜನ್ಮ ಪಡೆದ ಸೌಜನ್ಯ ಕೇಸ್ ಗಲಾಟೆ : ಮುಸ್ಲಿಮರಿಗೆ ಶೇ 4 ಮೀಸಲಾತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ನಿರ್ಧಾರ? | JANATA NEWS
ಬೆಂಗಳೂರು : ಮತ್ತೊಮ್ಮೆ ಮರುಜನ್ಮ ಪಡೆದ ಸೌಜನ್ಯ ಕೇಸ್ ಗಲಾಟೆ ಮಧ್ಯೆ ಮುಸ್ಲಿಮರಿಗೆ ಶೇ 4 ಮೀಸಲಾತಿ ಕಲ್ಪಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ಸರ್ಕಾರಿ ಕಾಮಗಾರಿ ಗುತ್ತಿಗೆಗಳಲ್ಲಿ ಎಸ್ಸಿ-ಎಸ್ಟಿ ಹಿಂದುಳಿದವರಿಗೆ ನೀಡಿರುವಂತೆ ಮುಸ್ಲಿಮರಿಗೆ ಶೇ 4ರಷ್ಟು (ಪ್ರವರ್ಗ 2ಬಿ) ಮೀಸಲಾತಿ ಕಲ್ಪಿಸಲು ಸಿಎಂ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಬಿಜೆಪಿ ಮುಖಂಡ ಹಾಗೂ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಖಂಡಿಸಿದ್ದಾರೆ.
ಈ ಕುರಿತು ಮಾತನಾಡಿರುವ ಯತ್ನಾಳ್ ಅವರು, "ಅಲ್ಪ ಸಂಖ್ಯಾತರ ಓಲೈಕೆಗೆ ಸಿವಿಲ್ ಕಾಮಗಾರಿಗಳಲ್ಲಿ ಮುಸ್ಲಿಮರಿಗೆ ಶೇ.4ರಷ್ಟು ಮೀಸಲಾತಿ ಕಲ್ಪಿಸಲು ಹೊರಟಿರುವ ಕಾಂಗ್ರೆಸ್ ಸರ್ಕಾರದ ನಿರ್ಧಾರ ಖಂಡನೀಯ. ಇದು ಸಂವಿಧಾನದ ಆಶಯಗಳಿಗೆ ತದ್ವಿರುದ್ಧವಾಗಿದೆ ಹಾಗೂ ತುಷ್ಟೀಕರಣ ರಾಜಕಾರಣದ ಪರಮಾವಧಿ. ಸಿವಿಲ್ ಕಾಮಗಾರಿಗಳಲ್ಲಿ 4% ರಷ್ಟು ಮೀಸಲಾತಿ ನೀಡುವುದಕ್ಕೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಕಾಯ್ದೆ 1999 [KTTP Act] ರಲ್ಲಿ ತಿದ್ದುಪಡಿ ತರುವುದಕ್ಕೆ ನಿರ್ಧರಿಸಿದೆ." ಎಂದಿದ್ದಾರೆ.
"ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ಇಲ್ಲದಿರುವಾಗ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಓಲೈಕೆಗೆ ತರುತ್ತಿರುವ ಈ ಮೀಸಲಾತಿ ಖಂಡನೀಯ. KTTP Act ಅನ್ನು ಯಾವುದೇ ಕಾರಣಕ್ಕೂ ತಿದ್ದುಪಡಿ ಮಾಡಬಾರದು. ಈಗಿರುವ ಕಾಯ್ದೆಯಲ್ಲಿನ ನಿಯಮಾವಳಿಗಳನ್ನು, ನಿಬಂಧನೆಗಳನ್ನು ಅನುಸರಿಸಿ - ಅರ್ಹ, ಸಂಪನ್ಮೂಲಗಳಿರುವ, ಗುಣಮಟ್ಟದ ಕೆಲಸ ಮಾಡುವ ಗುತ್ತಿಗೆದಾರರಿಗೆ ಸಿವಿಲ್ ಕಾಮಗಾರಿ ಸರ್ಕಾರ ನೀಡಲಿ.", ಎಂದು ಯತ್ನಾಳ್ ಅವರು ಒತ್ತಾಯಿಸಿದ್ದಾರೆ.
ಇನ್ನೂ ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಹಲವು ವಕೀಲರು ಖಂಡಿಸಿದ್ದಾರೆ, ಕಾಂಗ್ರೆಸ್ ಸರ್ಕಾರ ಮುಸಲ್ಮಾನರಿಗೆ ಸಿವಿಲ್ ಕಾಮಗಾರಿಗಳಲ್ಲಿ 4% ಮೀಸಲಾತಿ ಕಲ್ಪಿಸಿದರೆ ನಾವು ಅದನ್ನು ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಪ್ರಶ್ನಿಸಿ ಅಸಿಂಧುಗೊಳಿಸುತ್ತೇವೆ", ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.