ಜಾತಿಗಣತಿ ನೆಪದಲ್ಲಿ ಸಿದ್ದರಾಮಯ್ಯ ₹165 ಕೋಟಿ ದುರುಪಯೋಗ ಮಾಡಿದ್ದಾರೆ - ಸುನೀಲಕುಮಾರ | JANATA NEWS
ಬೆಂಗಳೂರು : ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯದ ಸಿದ್ದರಾಮಯ್ಯ ಸರಕಾರಕ್ಕೆ ಮತ್ತೊಮ್ಮೆ ಜಾತಿಗಣತಿಯನ್ನು ಮಾಡಲು ಆದೇಶಿಸಿದ ಬೆನ್ನಲ್ಲೇ, ರಾಜ್ಯ ಕಾಂಗ್ರೆಸ್ ಸರ್ಕಾರ ಮತ್ತೊಂದು ಭಾರಿ ಮುಜುಗರ ಎದುರಿಸುವಂತಾಗಿದ್ದು, ಪ್ರತಿಪಕ್ಷಗಳು ಸಿಎಂ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಒತ್ತಾಯ ಹೆಚ್ಚಿಸಿದೆ.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸುನೀಲಕುಮಾರ ಕಾರ್ಕಳ ಅವರು ಮಾತನಾಡಿ, ತಮ್ಮ ರಾಜಕೀಯ ಲಾಭಕ್ಕಾಗಿ ಜಾತಿಗಣತಿ ನೆಪದಲ್ಲಿ ಸಿದ್ದರಾಮಯ್ಯ ಅವರು ₹165 ಕೋಟಿ ದುರುಪಯೋಗ ಮಾಡಿದ್ದಾರೆ. ಅಲ್ಲದೇ, ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಕ್ಷಮೆಯನ್ನು ಕೋರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ಎಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ನಿನ್ನೆ ಪತ್ರಿಕಾಘೋಷ್ಟಿ ನಡೆಸಿದ ಸುನೀಲಕುಮಾರ ಕಾರ್ಕಳ ಅವರು, "ಕೇಂದ್ರ ಸರ್ಕಾರ ಜನಗಣತಿ ಮತ್ತು ಜಾತಿಗಣತಿ ಜೊತೆಗೆ ಮಾಡುವುದಾಗಿ ಈಗಾಗಲೇ ಘೋಷಿಸಿದೆ. ಕೇಂದ್ರ ಸರ್ಕಾರ ವೈಜ್ಞಾನಿಕವಾಗಿ ಜಾತಿಗಣತಿ ಮಾಡುವಾಗ ರಾಜ್ಯ ಸರ್ಕಾರ ಮತ್ತೊಂದು ಜಾತಿಗಣತಿ ಮಾಡುವ ಅಗತ್ಯವಿದೆಯಾ?"
"ಸಿದ್ದರಾಮಯ್ಯ ಅವರು ತಮ್ಮ ರಾಜಕೀಯ ಲಾಭಕ್ಕಾಗಿ ಜಾತಿಗಣತಿ ನೆಪದಲ್ಲಿ ₹165 ಕೋಟಿ ದುರುಪಯೋಗ ಮಾಡಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಅವೈಜ್ಞಾನಿಕ ದತ್ತಾಂಶವನ್ನು ಮುಂದಿಟ್ಟುಕೊಂಡು ಜನರ ಭಾವನೆಯ ಜೊತೆಗೆ ಆಟ ಆಡಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ಕ್ಷಮೆಯನ್ನು ಕೋರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು."