ನಮ್ಮ-ಮೆಟ್ರೋ ದರ ಏರಿಕೆ : ವರದಿ ಬಹಿರಂಗ ಕೋರಿ ಸಂಸದ ಸೂರ್ಯ ರಿಂದ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ; ಬಿಎಂಆರ್‌ಸಿಎಲ್ ಗೆ ನೋಟಿಸ್ | JANATA NEWS
ಬೆಂಗಳೂರು : ನಮ್ಮ ಮೆಟ್ರೋ ದರ ಏರಿಕೆಗೆ ಕಾರಣ ನೀಡುವಲ್ಲಿ ಮುಚ್ಚುಮರೆ ಮಾಡುತ್ತಿರುವ ಆರೋಪ ಎದುರಿಸುತ್ತಿರುವ ಬೆನ್ನಲ್ಲೇ, ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಈಗ ಬೆಂಗಳೂರು ಮೆಟ್ರೋ ರೈಲು ಕಾರ್ಪೊರೇಷನ್ ಲಿಮಿಟೆಡ್‌ಗೆ (BMRCL) ಹೈಕೋರ್ಟ್ ನೋಟಿಸ್ ಜಾರಿ ಮಾಡಿ 2 ವಾರದಲ್ಲಿ ಉತ್ತರಿಸುವಂತೆ ಸೂಚಿಸಿದೆ.
"ಶುಲ್ಕ ನಿಗದಿ ಸಮಿತಿ ವರದಿಯನ್ನು ಬಿಡುಗಡೆ/ಪ್ರಕಟಣೆ ಮಾಡುವಂತೆ ಕೋರಿ ನಾನು ಸಲ್ಲಿಸಿದ ರಿಟ್ ಅರ್ಜಿಗೆ ಪ್ರತಿಕ್ರಿಯೆಯಾಗಿ ಕರ್ನಾಟಕದ ಹೈಕೋರ್ಟ್ ಬಿಎಂಆರ್‌ಸಿಎಲ್‌ಗೆ ನೋಟಿಸ್ ಜಾರಿ ಮಾಡಿದೆ", ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
"ಪದೇ ಪದೇ ಪತ್ರಗಳು, ಬೇಡಿಕೆಗಳು ಮತ್ತು ಸಾರ್ವಜನಿಕ ಆಕ್ರೋಶದ ಹೊರತಾಗಿಯೂ, ಪಾರದರ್ಶಕತೆಯನ್ನು ಎತ್ತಿಹಿಡಿಯುವಲ್ಲಿ ಹಸ್ತಕ್ಷೇಪ ಮಾಡುವಂತೆ ಕೋರಿ ನಾನು ಹೈಕೋರ್ಟ್ ಅನ್ನು ಸಂಪರ್ಕಿಸಬೇಕಾಗಿ ಬಂದಿರುವುದು ದುರದೃಷ್ಟಕರ."
"ಸಾರ್ವಜನಿಕ ಅಧಿಕಾರಿಗಳು ಮಾಹಿತಿ ಪ್ರವೇಶಕ್ಕಾಗಿ ನಾಗರಿಕರನ್ನು ಹೈಕೋರ್ಟ್‌ಗಳನ್ನು ಸಂಪರ್ಕಿಸುವಂತೆ ಒತ್ತಾಯಿಸಿದಾಗ, ಅದು ವ್ಯವಸ್ಥಿತ ಆಡಳಿತ ವೈಫಲ್ಯಗಳನ್ನು ಪ್ರತಿಬಿಂಬಿಸುತ್ತದೆ. ಚುನಾಯಿತ ಸಂಸದರು ತಮ್ಮ ಬಾಗಿಲು ತಟ್ಟುತ್ತಿದ್ದಾರೆ ಎಂಬ ನ್ಯಾಯಾಲಯದ ಅವಲೋಕನವು ಈ ಪರಿಸ್ಥಿತಿಯನ್ನು ದೃಢೀಕರಿಸುತ್ತದೆ. ಮುಂದಿನ ವಿಚಾರಣೆ ಎರಡು ವಾರಗಳಲ್ಲಿ. ನಿಮ್ಮೆಲ್ಲರನ್ನೂ ತಿಳಿಸಲಾಗುವುದು. ಈಗಲೂ ಸಹ ರಾಜ್ಯ ಸರ್ಕಾರ ವರದಿಯನ್ನು ಬಿಡುಗಡೆ ಮಾಡಲು ತಡವಾಗಿಲ್ಲ.", ಎಂದು ಸಂಸದ ಸೂರ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನ ಇನ್ನೊಬ್ಬ ಸಂಸದ ಪಿಸಿ ಮೋಹನ್ ಅವರು ಈ ಕುರಿತು ಹೇಳಿದ್ದು, "ಪಾರದರ್ಶಕತೆಗೆ ಕರ್ನಾಟಕ ಹೈಕೋರ್ಟ್‌ನ ಆದೇಶಗಳು ಬೇಕಾಗಿಲ್ಲ. ಬೆಂಗಳೂರಿನ ಪ್ರಯಾಣಿಕರು ದರಗಳನ್ನು ಹೇಗೆ ನಿಗದಿಪಡಿಸಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲು ಅರ್ಹರು. ಬಿಎಂಆರ್‌ಸಿಎಲ್ ಈಗಲೇ ಶುಲ್ಕ ನಿಗದಿ ಸಮಿತಿ ವರದಿಯನ್ನು ಬಿಡುಗಡೆ ಮಾಡಬೇಕು. ಸಾರ್ವಜನಿಕ ನಂಬಿಕೆಯನ್ನು ರಹಸ್ಯ, ಮೌನ ಅಥವಾ ಕಲ್ಲುತೂರಾಟದ ಮೂಲಕ ನಿರ್ಮಿಸಲಾಗುವುದಿಲ್ಲ, ಮುಕ್ತತೆಯ ಮೂಲಕ ನಿರ್ಮಿಸಲಾಗುತ್ತದೆ.", ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಶುಲ್ಕ ನಿಗದಿ ಸಮಿತಿ ವರದಿಯನ್ನು ಬಹಿರಂಗ ಪಡಿಸುವಂತೆ ಕೋರಿ ಹೈಕೋರ್ಟ್ ನಲ್ಲಿ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ಇಂದು ನಡೆಯಿತು.
ವಿಚಾರಣೆ ವೇಳೆ, ನೀವಿಷ್ಟು ಪ್ರಬಲರಾಗಿದ್ದೂ ನಿಮಗೆ ವರದಿ ಸಿಗುತ್ತಿಲ್ಲವೇ ಎಂದು ನ್ಯಾಯಮೂರ್ತಿಗಳು ತೇಜಸ್ವಿ ಸೂರ್ಯ ಪರ ವಕೀಲರಿಗೆ ಪ್ರಶ್ನಿಸಿದರು. ಡಿಸೆಂಬರ್ ತಿಂಗಳಲ್ಲೇ ದರ ನಿಗದಿ ಸಮಿತಿ ವರದಿ ನೀಡಿದ್ದರೂ ಬಿಎಂಆರ್‌ಸಿಎಲ್ ವರದಿ ನೀಡುತ್ತಿಲ್ಲ. ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರೂ ಸಮಿತಿ ವರದಿ ಬಹಿರಂಗಪಡಿಸಿಲ್ಲ ಎಂದು ವಕೀಲರು ಉತ್ತರಿಸಿದರು. ಕೊನೆಗೆ ಬಿಎಂಆರ್‌ಸಿಎಲ್‌ಗೆ ನೋಟಿಸ್ ಜಾರಿ ಮಾಡಿದ ಕೋರ್ಟ್ ಅರ್ಜಿ ವಿಚಾರಣೆಯನ್ನು 2 ವಾರ ಮುಂದೂಡಿಕೆ ಮಾಡಿತು, ಎಂದು ವರದಿಯಾಗಿದೆ.