ಕೇಂದ್ರ ಸಚಿವ ಗಡ್ಕರಿಗೆ ಸಾಗರ - ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭ ಮುಂದೂಡಲು ಕೋರಿ ಸಿಎಂ ಸಿದ್ದರಾಮಯ್ಯ ಪತ್ರ | JANATA NEWS
ಬೆಂಗಳೂರು : ಸಾಗರ - ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭವನ್ನು ಮುಂದೂಡಲು ಕೋರಿ ಸಿಎಂ ಸಿದ್ದರಾಮಯ್ಯ ಅವರು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ ಸಚಿವರಾದ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದಿದ್ದಾರೆ.
ಇಂದು, ಜುಲೈ 14 ರಂದು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆ ಸಮಾರಂಭವನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು(ಎನ್‌ಎಚ್‌ಎ) ನಿರ್ಮಿಸಿದ ಸಾಗರ-ಸಿಗಂದೂರು ಕೇಬಲ್ ಸೇತುವೆಯು ಅತ್ಯಾಧುನಿಕ ಮತ್ತು ಅತಿ ಉದ್ದದ ಸೇತುವೆಯಾಗಿದ್ದು, ಇದನ್ನು ಇಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಉದ್ಘಾಟಿಸಲಿದ್ದಾರೆ, ಜೊತೆಗೆ ರೂ.2000 ಕೋಟಿ ಮೌಲ್ಯದ ಇತರ ಎನ್‌ಎಚ್‌ಎ ಯೋಜನೆಗಳ ಶಿಲಾನ್ಯಾಸ ಸಮಾರಂಭವೂ ನಡೆಯಲಿದೆ.
ನನ್ನನ್ನು ತಡವಾಗಿ ಆಮಂತ್ರಿಸಿದ್ದು, ಬೇರೆಡೆ ಕಾರ್ಯಕ್ರಮಗಳನ್ನು ನಾನು ಹಮ್ಮಿಕೊಂಡಿರುವುದರಿಂದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಮುಂದೂಡಿ, ಬೇರೊಂದು ದಿನ ಆಯೋಜಿಸಬೇಕು ಎಂದು ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ ಸಚಿವರಾದ ನಿತಿನ್ ಗಡ್ಕರಿಯವರಿಗೆ ಪತ್ರ ಬರೆದಿದ್ದೇನೆ ಎಂದು ಸಿಎಂ ಮಾಹಿತಿ ಹಂಚಿಕೊಂಡಿದ್ದಾರೆ.
ಪತ್ರದ ಸಾರಾಂಶ :
"ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಶಿವಮೊಗ್ಗ ಜಿಲ್ಲೆ ಸಾಗರದ ನೆಹರೂ ಕ್ರೀಡಾಂಗಣದಲ್ಲಿ ಇಂದು ಸಾಗರ - ಸಿಗಂದೂರು ನಡುವಿನ ಸೇತುವೆ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಿದೆ. ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರನ್ನು ಸಹಾ ಮುದ್ರಿಸಲಾಗಿದೆ. ಆದರೆ ನನಗೆ ಈ ಬಗ್ಗೆ ಮುಂಚಿತವಾಗಿ ಮಾಹಿತಿ ನೀಡದ ಕಾರಣದಿಂದ ಈಗಾಗಲೇ ನನ್ನ ಅಧ್ಯಕ್ಷತೆಯಲ್ಲಿ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ."
"ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಯು ಇಂತಹ ರಾಜ್ಯಮಟ್ಟದ ಕಾರ್ಯಕ್ರಮ ಆಯೋಜನೆಗೆ ಮುನ್ನ ರಾಜ್ಯ ಸರ್ಕಾರವನ್ನು ಮುಂಚಿತವಾಗಿಯೇ ಸಂಪರ್ಕಿಸಿದ್ದರೆ ಮತ್ತಷ್ಟು ಸಮರ್ಪಕವಾಗಿರುತ್ತಿತ್ತು. ಮುಂದೆ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರವನ್ನು ಸಕಾಲದಲ್ಲಿ ಸಂಪರ್ಕಿಸುವಂತೆ ಹೆದ್ದಾರಿ ಮತ್ತು ಭೂಸಾರಿಗೆ ಇಲಾಖೆಗೆ ಸೂಚನೆ ನೀಡಬೇಕು ಎಂದು ತಮ್ಮಲ್ಲಿ ವಿನಂತಿಸುತ್ತೇನೆ."
"ಇಂದಿನ ಕಾರ್ಯಕ್ರಮವನ್ನು ಮುಂದೂಡಿ, ನಿಮಗೆ ಅನುಕೂಲವಾಗುವ ಒಂದೆರೆಡು ದಿನಾಂಕಗಳನ್ನು ನನಗೆ ಒದಗಿಸಬೇಕೆಂದು ಕೋರುತ್ತೇನೆ. ಆ ಮೂಲಕ ಇಂಥದ್ದೊಂದು ಮಹತ್ವದ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ನಾನು ಕೂಡ ಭಾಗವಹಿಸಲು ಸಾಧ್ಯವಾಗಲಿದೆ."