ಧರ್ಮಸ್ಥಳದ ಎಸ್ಐಟಿ ತನಿಖೆಯಲ್ಲಿ ತಮ್ಮ ಪಾತ್ರವಿಲ್ಲ - ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ಟೀಕಿಸಿದ ಕೇಂದ್ರ ಸಚಿವ ಜೋಶಿ | JANATA NEWS
ನವದೆಹಲಿ : ಧರ್ಮಸ್ಥಳದಲ್ಲಿ ಅನುಮಾನಾಸ್ಪದ ಸಾವುಗಳ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ತಮ್ಮ ಎಸ್ಐಟಿ ರಚನೆಯಲ್ಲಿ ತಮ್ಮ ಪಾತ್ರವಿಲ್ಲ ಎನ್ನುತ್ತಿರುವುದು ಖಂಡನೀಯ ಎಂದು ಅವರನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಟೀಕಿಸಿದ್ದಾರೆ.
ಹಿಂದೂಗಳ ಪವಿತ್ರಸ್ಥಳವಾದ ಧರ್ಮಸ್ಥಳದಲ್ಲಿ ಯಾರೋ ಅನಾಮದೇಯ ಅನುಮಾನಾಸ್ಪದ ಸಾವುಗಳ ಕುರಿತು ಮಾಡಿದ ಆರೋಪದ ಮೇರೆಗೆ ತನಿಖೆಗಾಗಿ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಿದ ಸಿಎಂ ಸಿದ್ದರಾಮಯ್ಯ ನೇತ್ರತ್ವದ ರಾಜ್ಯ ಸರ್ಕಾರ, ಈಗ ಸಾಕಷ್ಟು ಗುಂಡಿ ಅಗೆದು ಕೊನೆಗೂ ತನಿಖೆಯಲ್ಲಿ ಏನನ್ನೂ ಸಾಬೀತು ಪಡೆಸಲು ಆಗದ ಕಾರಣ ಈಗ ಭಾರಿ ಮುಜುಗರ ಎದುರಿಸುವಂತಾಗಿದೆ.
ಪ್ರಹ್ಲಾದ್ ಜೋಶಿ ಅವರು ತಮ್ಮ ಎಕ್ಸ್ ಪೋಸ್ಟ್ ನಲ್ಲಿ, "ಪವಿತ್ರವಾದ ಧರ್ಮಸ್ಥಳಕ್ಕೆ ತಲೆಮಾರಿನ ಇತಿಹಾಸವಿದೆ. ಪ್ರತಿದಿನ ಲಕ್ಷಾಂತರ ಜನ ಧರ್ಮಸ್ಥಳಕ್ಕೆ ಭೇಟಿ ನೀಡುತ್ತಾರೆ. ದಟ್ಟಾರಣ್ಯದ ಪ್ರದೇಶದ ನೇತ್ರಾವತಿ ಸ್ನಾನ ಘಟ್ಟದ 13 ಭಾಗಗಳಲ್ಲಿ ಶವಗಳನ್ನು ಹೂತಾಕಿದ ಆರೋಪ, ಪರ-ವಿರೋಧದ ಚರ್ಚೆಯ ನಡುವೆಯೇ #SIT ರಚನೆ ಮಾಡಿದ್ದು ನೀವೇ ಸಿದ್ದರಾಮಯ್ಯನವರೇ? 13 ಜಾಗಗಳಲ್ಲಿ ಉತ್ಖನನ ಮಾಡಿದ ಈವರೆಗೂ ಏನೂ ಸಿಗದ ಬಳಿಕ 'ಧರ್ಮಸ್ಥಳ ತನಿಖೆಯಲ್ಲಿ ಸರ್ಕಾರದ ಪಾತ್ರವಿಲ್ಲ' ಎಂದು ಸಿಎಲ್ ಪಿ ಸಭೆಯಲ್ಲಿ ಹೇಳುತ್ತಿರುವ ಮಾತುಗಳು ನಿಜಕ್ಕೂ ದುರಂತ ಹಾಗೂ ಖಂಡನೀಯ. ನಿಮ್ಮ ಪಾತ್ರವಿಲ್ಲದೆ #SIT ರಚನೆ ಮಾಡಲಾಯಿತಾ? ಇಷ್ಟೆಲ್ಲಾ ಹೈಡ್ರಾಮಾ ಮಾಡುತ್ತಿರುವುದಕ್ಕೂ ಮೊದಲೇ ಸರಿಯಾದ ಪೊಲೀಸ್ ತನಿಖೆ ಮಾಡಬಹುದಿತ್ತು. ಆದರೆ SIT ರಚಿಸಿ, ತನಿಕೆಗೆ ಆದೇಶ ಮಾಡಿರೋದೆ ನೀವು. ಜನರ ನಂಬಿಕೆಯ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕಾದ ಸರ್ಕಾರ, ಈ ರೀತಿ ಬೇಜವಾಬ್ದಾರಿತನದಿಂದ ನಡೆದು ಕೊಳ್ಳುತ್ತಿರುವುದು, ಅತ್ಯಂತ ಖಂಡನೀಯ." ಎಂದು ಟೀಕಿಸಿದ್ದಾರೆ.