ಲಸಿಕೆ ಹಾಕಿಸಿಕೊಂಡಿದ್ದ ಐವರು ಸೇರಿ ಏಳು ವೈದ್ಯರಿಗೆ ಕೋವಿಡ್-19 ದೃಢ | Janata news
ಚಾಮರಾಜನಗರ : ಜಿಲ್ಲೆಯಲ್ಲಿ ವಾರದ ಅವಧಿಯಲ್ಲಿ ಏಳು ಮಂದಿ ವೈದ್ಯರಿಗೆ ಕೋವಿಡ್ ಇರುವುದು ದೃಢಪಟ್ಟಿದ್ದು, ಇವರಲ್ಲಿ ಐವರು ಇತ್ತೀಚೆಗೆ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದರು.
ಚಾಮರಾಜನಗರ ಜಿಲ್ಲಾ ಕೋವಿಡ್ ಆಸ್ಪತ್ರೆಯ ಐದು ವೈದ್ಯರಿಗೆ ಕೊರೊನಾ ಲಸಿಕೆ ಪಡೆದ ಹತ್ತು ದಿನಗಳ ಅಂತರದಲ್ಲಿ ಸೋಂಕು ಕಾಣಿಸಿಕೊಂಡಿದೆ ಎಂದು ಚಾಮರಾಜನಗರ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಲಸಿಕೆ ಹಾಕಿಸಿಕೊಂಡ ಐವರು ವೈದ್ಯರ ಪೈಕಿ ಇಬ್ಬರು ಕೋವಿಶೀಲ್ಡ್ ಹಾಗೂ ಮೂವರು ಕೋವ್ಯಾಕ್ಸಿನ್ ಹಾಕಿಸಿಕೊಂಡಿದ್ದಾರೆ. ನಾಲ್ವರು ಹೋಂ ಐಸೊಲೇಷನ್ನಲ್ಲಿದ್ದು, ಒಬ್ಬರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲೆಯಲ್ಲಿ ಇದೇ 16ರಿಂದ ಲಸಿಕೆ ಅಭಿಯಾನ ಆರಂಭಗೊಂಡಿತ್ತು. ಲಸಿಕೆ ಹಾಕಿಸಿಕೊಂಡ ವಾರದ ನಂತರ ಈ ವೈದ್ಯರಲ್ಲಿ ರೋಗ ಲಕ್ಷಣಗಳು ಕಂಡು ಬಂದಿದ್ದು, ಸೋಂಕು ದೃಢಪಟ್ಟ ವೈದ್ಯರು ಸೇರಿದಂತೆ ಲಸಿಕೆ ಹಾಕಿಸಿಕೊಂಡಿರುವ ಎಲ್ಲರೂ ಒಂದು ಡೋಸ್ ಮಾತ್ರ ಪಡೆದಿದ್ದಾರೆ. ಇನ್ನೊಂದು ಡೋಸ್ ಬಾಕಿ ಇದೆ. ನಾಲ್ಕು ವಾರಗಳ ನಂತರ ಎರಡನೇ ಡೋಸ್ ಲಸಿಕೆ ಹಾಕಲಾಗುತ್ತದೆ.
ಆ ಬಳಿಕವೂ ದೇಹದಲ್ಲಿ ಪ್ರತಿಕಾಯ (ಆಯಂಡಿ ಬಾಡಿ) ಸೃಷ್ಟಿಯಾಗಲು ಸಮಯ ಬೇಕಾಗುತ್ತದೆ. ಹಾಗಾಗಿ, ಲಸಿಕೆ ಹಾಕಿದ ತಕ್ಷಣ ಕೋವಿಡ್ ಬರುವುದಿಲ್ಲ ಎಂದು ಹೇಳಲು ಆಗುವುದಿಲ್ಲ. ಲಸಿಕೆ ಪಡೆದುಕೊಂಡರೂ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಂ.ಸಿ.ರವಿ ಅವರು ಹೇಳಿದರು.