ಬಸವಕಲ್ಯಾಣದಲ್ಲಿ ವಿಜಯೇಂದ್ರ ಅಭ್ಯರ್ಥಿಯಾಗಲ್ಲ: ಸ್ಪಷ್ಟನೆ ನೀಡಿದ ಸಿಎಂ ಯಡಿಯೂರಪ್ಪ | Janata news
ರಾಯಚೂರು : 2018ರಲ್ಲಿ ಶಾಸಕ ಬಿ. ನಾರಾಯಣ್ ರಾವ್ ಅವರ ನಿಧನದಿಂದ ತೆರವಾಗಿದ್ದ ಬಸವಕಲ್ಯಾಣ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಈ ಕ್ಷೇತ್ರದಿಂದ ತಮ್ಮ ಪುತ್ರ ವಿಜಯೇಂದ್ರ ಸ್ಪರ್ಧೆ ಮಾಡುವುದಿಲ್ಲ ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮಸ್ಕಿಯಲ್ಲಿ ಪ್ರತಾಪಗೌಡ ಪ್ರಚಾರಕ್ಕೆ ಹೋದಾಗ ಭವ್ಯ ಸ್ವಾಗತ ಸಿಕ್ಕಿದೆ. ಪ್ರತಾಪಗೌಡ ಪಾಟೀಲ 20 ಸಾವಿರ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಕ್ಷೇತ್ರದಲ್ಲಿ ಮತ್ತೊಮ್ಮೆ ಬಂದು ಪ್ರಚಾರ ಮಾಡುತ್ತೇನೆ. ಬಸವಕಲ್ಯಾಣ ದಲ್ಲಿ ನಾವು ಗೆದ್ದಾಗಿದೆ ಎಂದರು.
ಈ ಬಾರಿಯ ಉಪ ಚುನಾವಣೆಯಲ್ಲಿ ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದಲ್ಲಿ ವಿಜಯೇಂದ್ರ ಅಭ್ಯರ್ಥಿಯಾಗಲಿದ್ದಾರೆ ಎಂಬುದು ನೂರಕ್ಕೆ ನೂರು ಸುಳ್ಳು. ಆದರೆ, ಅವರು ಮೈಸೂರಿಗೆ ಹೋಗಿ ಅಲ್ಲಿರುತ್ತಾರೆ. ಅಲ್ಲಿಯೇ ಮನೆ ಮಾಡಲಿದ್ದು, ಇದರಿಂದ ಐದಾರು ಜಿಲ್ಲೆಗಳಲ್ಲಿ ಪಕ್ಷಕ್ಕೆ ಅನುಕೂಲವಾಗಲಿದೆ. ಮುಂದಿನ ಬಾರಿ ವರುಣಾ ಕ್ಷೇತ್ರಕ್ಕೆ ಯಾರು ಸ್ಪರ್ಧಿಸುತ್ತಾರೆಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಉಪಚುನಾವಣೆಯ ಅಭ್ಯರ್ಥಿಗಳ ಪಟ್ಟಿ ಮಾಡಿ ದೆಹಲಿಗೆ ಕಳಿಸಿದ್ದೇವೆ. ಇಂದು ಅಥವಾ ನಾಳೆ ಅಂತಿಮ ಪಟ್ಟಿ ಬರುತ್ತದೆ ಎಂದರು.
ಇತಿಹಾಸದಲ್ಲೇ ಮೊದಲ ಬಾರಿಗೆ ತೆರಿಗೆ ಹೊರೆ ಇಲ್ಲದ ಐತಿಹಾಸಿಕ ಬಜೆಟ್ ಮಂಡಿಸಲಾಗಿದೆ. ಮುಂದಿನ ಚುನಾವಣೆಯಲ್ಲೂ ಬಿಜೆಪಿ 130 ಸೀಟುಗಳನ್ನು ಗೆಲ್ಲಲಿದೆ ಎಂದರು.