ರೋಹಿಣಿ ಸಿಂಧೂರಿ ಮನೆಯಲ್ಲಿ ಸ್ವಿಮ್ಮಿಂಗ್ ಪೂಲ್, ಜಿಮ್: ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಮುಖಂಡನ ಗಂಭೀರ ಆರೋಪ | ಜನತಾ ನ್ಯೂಸ್
ಮೈಸೂರು : ಡಿ.ಸಿ ರೋಹಿಣಿ ಸಿಂಧೂರಿ ತಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲಿ ಹೈಟೆಕ್ ಸ್ವಿಮ್ಮಿಂಗ್ ಪೂಲ್ ಹಾಗೂ ಜಿಮ್ ನಿರ್ಮಾಣ ಮಾಡಿಸಿದ್ದಾರೆ. ಜಿಲ್ಲಾಧಿಕಾರಿ ನಿವಾಸವು ಪಾರಂಪರಿಕ ಕಟ್ಟಡಗಳ ವ್ಯಾಪ್ತಿಗೆ ಸೇರಿದ್ದು, ಕೋವಿಡ್ ಸಂಕಷ್ಟ ಕಾಲದಲ್ಲಿ ಇಂತಹ ಮೋಜು ಮಸ್ತಿ ಏಕೆ ಬೇಕಿತ್ತು ಎಂದು ಜೆಡಿಎಸ್ ಮುಖಂಡ ಕೆ.ವಿ. ಮಲ್ಲೇಶ್ ಕಿಡಿ ಕಾರಿದ್ದಾರೆ.
ಭಾನುವಾರ ಮೈಸೂರಲ್ಲಿ ಮಾತಾಡಿದ ಕೆ. ವಿ. ಮಲ್ಲೇಶ್, ಸ್ವಿಮ್ಮಿಂಗ್ ಪೂಲ್ ನಿರ್ಮಿಸಲು ಯಾವ ಅನುದಾನ ಖರ್ಚು ಮಾಡಲಾಗಿದೆ? ಇದಕ್ಕೆ ಸರ್ಕಾರದ ಅನುದಾನ ಬಳಸಿದ್ದೀರಾ? ಅಥವಾ ಬೇರೆ ಯಾರಾದರೂ ಪ್ರಾಯೋಜಕರ ಸಹಾಯ ಪಡೆದಿದ್ದೀರಾ? ಎಂದರು.
ಕೋವಿಡ್ ಕಾಲದಲ್ಲಿ ದಿನದ 24 ಗಂಟೆಯೂ ಕಾಲ ಕೆಲಸ ಮಾಡುತ್ತೇನೆ ಎಂದು ಹೇಳುತ್ತೀರಿ. ಹಾಗಾದರೆ, ಇಂತಹ ಮೋಜು ಮಸ್ತಿಗೆ ಸಮಯ ಹೇಗೆ ಸಿಗುತ್ತದೆ. ಜನಪರವಾಗಿ ಚಿಂತಿಸುವ ಜಿಲ್ಲಾಧಿಕಾರಿಯಾದವರು ಇಂತಹ ಕೆಲಸ ಮಾಡುವರೇ? ನಿಮಗೆ ನಿಜಕ್ಕೂ ಜನಪರ ಕಾಳಜಿ ಇಲ್ಲ ಎಂದಿದ್ದಾರೆ.
ಆರ್.ಟಿ.ಐ ಮೂಲಕ ಮಾಹಿತಿ ಕೋರುವೆ. ಈ ಕಾಮಗಾರಿಗೆ ಬಳಸಿದ ಅನುದಾನದ ಕುರಿತು ಮಾಹಿತಿ ಕೊಡಬೇಕು ಎಂದು ತಾಯಂದಿರ ದಿನವಾದ ಇಂದು ಆಗ್ರಹಿಸುತ್ತೇನೆ. ಜನರಿಗೆ ಒಳ್ಳೆಯದು ಮಾಡಲು ಆಗದಿದ್ದರೆ, ಮೈಸೂರಿನಿಂದ ನಿರ್ಗಮಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜನ ಯಾರೇ ಹೋಗಿ ಸಮಸ್ಯೆ ಹೇಳಿಕೊಂಡರೂ ನಿಮ್ಮ ಹತ್ತಿರ ಸೂಕ್ತ ಸ್ಪಂದನೆ ಸಿಗುತ್ತಿಲ್ಲ. ಪಾರಂಪರಿಕ ಕಟ್ಟಡಗಳ ಸಮಿತಿಗೆ ಜಿಲ್ಲಾಧಿಕಾರಿಗಳೇ ಅಧ್ಯಕ್ಷರು. ಯಾರೇ ಪಾರಂಪರಿಕ ಕಟ್ಟಡದ ಸಮೀಪ ಕಟ್ಟಡ ಕಟ್ಟಬೇಕಾದರೆ ಡಿಸಿ ಅನುಮತಿ ಕಡ್ಡಾಯ. ಈ ವಿಚಾರದಲ್ಲಿ ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ ಎಂದು ದೂರಿದರು.
ಸ್ವಿಮ್ಮಿಂಗ್ ಪೂಲ್ ನಿರ್ಮಾಣದಿಂದ ಪಾರಂಪರಿಕ ಕಟ್ಟಡಕ್ಕೆ ಧಕ್ಕೆಯಾಗಿದೆ ಎಂದು ಪೂಲ್ನ ಚಿತ್ರಗಳನ್ನು ಪ್ರದರ್ಶಿಸಿ ಮಲ್ಲೇಶ್ ಗಂಭೀರ ಆರೋಪ ಮಾಡಿದರು.