ಬಿಎಸ್ವೈಗೆ ಸಿದ್ದರಾಮಯ್ಯರಿಂದ ಪತ್ರ: ಅವರಿಗೆ 10 ಸಾವಿರ ರೂ. ನೀಡಿ.. ಇವರಿಗೆ 6 ಸಾವಿರ ಕೊಡಿ. 10 ಕೆಜಿ ಅಕ್ಕಿ ನೀಡಿ! | ಜನತಾ ನ್ಯೂಸ್
ಬೆಂಗಳೂರು : ಕೊರೊನಾ ಸಾಂಕ್ರಾಮಿಕ ನಿಯಂತ್ರಣಕ್ಕಾಗಿ ನಾಳೆಯಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಾಗಲಿದೆ. ಈ ಹಿನ್ನೆಲೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪಗೆ ಪತ್ರ ಬರೆದಿದ್ದು, ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ವ್ಯಕ್ತವಾದ ಸಲಹೆಗಳನ್ನು ಸರ್ಕಾರಕ್ಕೆ ನೀಡಿದ್ದಾರೆ.
ರಾಜ್ಯದಲ್ಲಿ ಸದ್ಯ ಬೇಡಿಕೆ ಇರುವುದಕ್ಕಿಂತ ಹೆಚ್ಚಿನ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ನಮ್ಮಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು. ಜಿಲ್ಲಾವಾರು ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಬೇಕು. ಆಕ್ಸಿಜನ್ ಸಿಲಿಂಡರುಗಳ ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆ ನಿಲ್ಲಿಸಿ ಮನೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೂ ಸುಲಭವಾಗಿ ಆಕ್ಸಿಜನ್ ಸಿಗುವಂತೆ ಮಾಡಬೇಕು.
ಆಕ್ಸಿಜನ್ ಉತ್ಪಾದನೆ ಆಗುತ್ತಿರುವ ಪ್ರದೇಶಗಳಲ್ಲೇ ಆಕ್ಸಿಜನ್ ಲಭ್ಯತೆಯ ಆಧಾರದ ಮೇಲೆ ತಾತ್ಕಾಲಿಕ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಬೇಕು. ಜಿಲ್ಲಾವಾರು ಚಿಕಿತ್ಸೆ ಎಂಬ ಅವೈಜ್ಞಾನಿಕ ವಿಧಾನವನ್ನು ಕೈಬಿಟ್ಟು ಸುತ್ತಮುತ್ತಲ ಏಳೆಂಟು ಜಿಲ್ಲೆಗಳ ರೋಗಿಗಳನ್ನು ಒಂದು ಕಡೆ ತಂದು ಆಕ್ಸಿಜನ್ ನೀಡಿ ರಕ್ಷಿಸಬೇಕು. ಇದರಿಂದ ಒತ್ತಡ ಕಡಿಮೆಯಾಗುತ್ತದೆ.
ಈ ಜೀವರಕ್ಷಕ ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಪ್ರತಿ ರೋಗಿಗೆ ಕನಿಷ್ಟ ಮಟ್ಟದ ಮೊತ್ತವನ್ನು ನಿಗಧಿ ಪಡಿಸಲಾಗಿದೆ. ಅದರಿಂದ ಸಮರ್ಪಕವಾಗಿ ರೆಮ್ಡಿಸಿವಿರ್ ನಂಥ ಔಷಧಗಳನ್ನೂ ನೀಡಲಾಗುತ್ತಿಲ್ಲ ಎಂಬ ಮಾಹಿತಿ ಇದೆ. ಈ ಅವ್ಯವಸ್ಥೆಯನ್ನು ಸರಿ ಮಾಡಬೇಕು.
ರಾಜ್ಯದ ಅಸಹಾಯಕ ರೋಗಿಗಳಿಗೆ ಸಾಮಾನ್ಯ, ಐ.ಸಿ.ಯು, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಇರುವ ಸಾಕಷ್ಟು ಬೆಡ್ಗಳನ್ನು ಸ್ಥಾಪಿಸಲು ಯಾವ ಸಮಸ್ಯೆ ಇದೆ? ಬೆಡ್ಗಳು ಎಷ್ಟು ಬೇಕಾಗಬಹುದು ಎಂಬುದನ್ನು ಮೊದಲೇ ಅಂದಾಜಿಸಿ ಕಾರ್ಯೋನ್ಮಖರಾಗಬೇಕು.
ವೈದ್ಯರುಗಳಿಗೆ ಸಂಬಂಧಿಸಿದಂತೆ, ಖಾಸಗಿ, ನಿವೃತ್ತರಾದವರನ್ನು ಅಗತ್ಯ ಬಿದ್ದರೆ ನೇಮಿಸಿಕೊಳ್ಳಬೇಕು. ದಾದಿಯರ ವಿಷಯದಲ್ಲೂ ಹಾಗೆ ಮಾಡಬೇಕು.
ಈಗಾಗಲೇ ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಂಡಿರುವ ಅಂತಿಮ ವರ್ಷಗಳಲ್ಲಿರುವ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ನಿಯೋಜಿಸಬೇಕು.
ಪ್ರತಿಯೊಬ್ಬರಿಗೂ ತಿಂಗಳಿಗೆ ತಲಾ 10 ಕೆ.ಜಿ. ಅಕ್ಕಿ ನೀಡಬೇಕು. ಬೇಳೆ, ಅಡುಗೆ ಎಣ್ಣೆ, ಮುಂತಾದ ದಿನಸಿ ಪದಾರ್ಥಗಳುಳ್ಳ ಕಿಟ್ಗಳನ್ನು ನೀಡಬೇಕು
ಪ್ರತಿ ಬಿ.ಪಿ.ಎಲ್ ಕುಟುಂಬಕ್ಕೆ ಮೊದಲಿಗೆ 10,000 ರೂಪಾಯಿ ನೀಡಬೇಕು, ತಿಂಗಳಿಗೆ 6,000 ರೂಪಾಯಿಗಳನ್ನು ನೀಡಬೇಕು.
ರಾಜ್ಯದ ರೈತರಿಗೆ, ಕುಶಲಕರ್ಮಿ ಸಮುದಾಯಗಳಿಗೆ, ಕಾರ್ಮಿಕರಿಗೆ, ಡ್ರೈವರ್ಗಳಾದಿಯಾಗಿ ಎಲ್ಲ ದುಡಿಯುವ ವರ್ಗಗಳಿಗೆ 10,000 ರೂಪಾಯಿಗಳನ್ನು ನೀಡಬೇಕು.
ಸಣ್ಣ, ಅತಿ ಸಣ್ಣ, ಸೂಕ್ಷ್ಮ, ಗೃಹ ಕೈಗಾರಿಕೆಗಳಿಗೆ, ವಾಹನಗಳ ಮಾಲೀಕರ ಸಭೆಗಳನ್ನು ನಡೆಸಿ ಸೂಕ್ತ ಪ್ಯಾಕೇಜ್ ನೀಡಬೇಕು
ಕನಿಷ್ಟ 200 ಮಾನವ ದಿನಗಳ ಯೋಜನೆಯನ್ನು ಜಾರಿಗೊಳಿಸಬೇಕು. ಅಗತ್ಯ ಇರುವ ಕಡೆ ಬೇಡಿಕೆಯನ್ನು ಆಧರಿಸಿ ಉದ್ಯೋಗ ನೀಡಬೇಕು.
ಪ್ರಸ್ತುತ ಇರುವ ಹಣದುಬ್ಬರವನ್ನು ಆಧರಿಸಿ ನರೇಗಾ ಕೂಲಿ ಮೊತ್ತವನ್ನು ಪರಿಷ್ಕರಿಸಬೇಕು ಮತ್ತು ಹೆಚ್ಚಿಸಬೇಕು.
ನರೇಗಾ ಯೋಜನೆಯಡಿ ಕೆಲಸ ಮಾಡಿದವರಿಗೆ 4 ತಿಂಗಳಿಂದ ಹಣ ಬಿಡುಗಡೆ ಮಾಡಿಲ್ಲ. ಈ ಬಾಕಿ ಉಳಿಸಿಕೊಂಡಿರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು.