ಕೋವಿಡ್ ರಿಪೋರ್ಟ್ ದಂಧೆ: ಹಣ ಕೊಟ್ರೆ ಪಾಸಿಟಿವ್ ಆಗಿದ್ದು ನೆಗೆಟಿವ್ ಆಗ್ತಿತ್ತು! | ಜನತಾ ನ್ಯೂಸ್
ಬೆಂಗಳೂರು : ಹೊರ ರಾಜ್ಯಗಳಿಗೆ ಪ್ರಯಾಣ ಮಾಡುವವರಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಅನ್ನು ರೈಲ್ವೆ ಇಲಾಖೆ ಕಡ್ಡಾಯಗೊಳಿಸಿದೆ.
ಆದರೆ ಈಗ ಬಹುತೇಕ ಮಂದಿ ಪಾಸಿಟಿವ್ ಸೋಂಕಿತರು ಇರುವ ಕಾರಣ, ಅವರಿಗೆ ಹೊರ ರಾಜ್ಯಗಳಿಗೆ ಹೋಗುವುದು ಕಷ್ಟವಾಗುತ್ತಿದೆ. ಇಂಥವರನ್ನೇ ಬಂಡವಾಳವಾಗಿಸಿಕೊಂಡು ಪಾಸಿಟಿವ್ ಇದ್ದರೂ ನೆಗೆಟಿವ್ ವರದಿ ನೀಡುವ ಇಲ್ಲವೇ ಚೆಕ್ ಮಾಡದೆಯೇ ನೆಗೆಟಿವ್ ವರದಿ ನೀಡುವ ಖದೀಮರ ಗುಂಪು ಸೃಷ್ಟಿಯಾಗಿವೆ.
ಅಂಥ ಗುಂಪುಗಳಲ್ಲಿ ಒಂದು ಗುಂಪಿನ ಕಿಂಗ್‌ಪಿನ್ ಈಗ ಸಿಕ್ಕಿಬಿದ್ದಿದ್ದಾನೆ, ಈ ದಂಧೆಯ ಕಿಂಗ್ಪಿನ್ನನ್ನು ಉಪ್ಪಾರಪೇಟೆ ಪೊಲೀಸರು ಬಂಧಿಸಿದ್ದಾರೆ. ಸಂಪತ್ ಲಾಲ್(35) ಬಂಧಿತ ಆರೋಪಿ. ಈ ಪ್ರಕರಣದ ಮತ್ತೊಬ್ಬ ಆರೋಪಿ ಎಸ್ಕೇಪ್ ಆಗಿದ್ದಾನೆ.
ಅಕ್ಕಿಪೇಟೆ ನಿವಾಸಿಯಾಗಿದ್ದ ಆರೋಪಿ ಸಂಪತ್ ಲಾಲ್, ರಾಜಸ್ಥಾನ ಹಾಗೂ ಪಶ್ಚಿಮ ಬಂಗಾಳಕ್ಕೆ ಹೋಗುವವರಿಗೆ ನಕಲಿ ಕೊರೊನಾ ನೆಗೆಟಿವ್ ರಿಪೋರ್ಟ್ ತಯಾರಿಸಿಕೊಡ್ತಿದ್ದ. ಕೊರೊನಾ ಟೆಸ್ಟ್ ಮಾಡದೆಯೇ, ನಕಲಿ ವೈದ್ಯರ ಹೆಸರು, ಸೀಲ್, ವೈದ್ಯರಿಂದ ದೃಢೀಕರಣ ನೀಡಿದ ರೀತಿ ರಿಪೋರ್ಟ್ ತಯಾರಿಸುತ್ತಿದ್ದ.
ಒಂದು ನಕಲಿ ನೆಗೆಟಿವ್ ರಿಪೋರ್ಟ್ಗೆ 3-4 ಸಾವಿರ ರೂಪಾಯಿ ಹಣ ಪಡೆಯುತ್ತಿದ್ದ ಎನ್ನಲಾಗಿದೆ. 15 ದಿನಗಳಲ್ಲಿ ಅನೇಕ ಪ್ರಯಾಣಿಕರಿಗೆ ನಕಲಿ ಕೋವಿಡ್ ನೆಗೆಟಿವ್ ಸರ್ಟಿಫಿಕೇಟ್ ಕೊಟ್ಟಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.
ಮೂರು ನಕಲಿ ಕೋವಿಡ್ ನೆಗಿಟಿವ್ ಸರ್ಟಿಫಿಕೇಟ್, ಒಂದು ಮೊಬೈಲ್ ಸೀಜ್ ಮಾಡಲಾಗಿದ್ದು, ಈತನ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ