ವಿದ್ಯುತ್ ಗುತ್ತಿಗೆದಾರರ ನಿರ್ಲಕ್ಷ್ಯ: ರಸ್ತೆಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಸ್ಥಳದಲ್ಲೇ ಬೈಕ್ ಸವಾರನ ಸಾವು! | ಜನತಾ ನ್ಯೂಸ್
ಉಡುಪಿ : ವಿದ್ಯುತ್ ಗುತ್ತಿಗೆದಾರರೊಬ್ಬರ ನಿರ್ಲಕ್ಷ್ಯದಿಂದಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ಬೈಂದೂರು ತಾಲೂಕು ಆಲಗದ್ದೆ ಯರುಕೋಣೆ ನಿವಾಸಿ ಶೇಖರ್ ಶೆಟ್ಟಿ (68) ಮೃತಪಟ್ಟವರು. ಬೈಂದೂರಿನ ಹೇರೂರು-ಅರೆಹೊಳೆ ರಸ್ತೆಯಲ್ಲಿ ಈ ಅವಘಡ ಸಂಭವಿಸಿದೆ.
ಬೈಂದೂರು ತಾಲೂಕು ಹೇರೂರು ಗ್ರಾಮದ ಹೇರೂರು-ಅರೆಹೊಳೆ ರಸ್ತೆಯಲ್ಲಿ ಗಾಳಿ ಮಳೆಗೆ ಬಿದ್ದಿದ್ದ ವಿದ್ಯುತ್ ತಂತಿಗಳ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ವೇಳೆ ಯಾವುದೇ ಮುಂಜಾಗ್ರತಾ ಫಲಕ ಅಳವಡಿಸದ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಗಮನಿಸದ ಆಲಗದ್ದೆ ಯರುಕೋಣಿ ನಿವಾಸಿ ಶೇಖರ್ ಶೆಟ್ಟಿ ಬೈಕ್ ಮೂಲಕ ರಸ್ತೆ ಬದಿಯಿಂದ ಹಾದು ಹೋಗಿದ್ದಾರೆ. ಈ ವೇಳೆ ನೇತಾಡುತ್ತಿದ್ದ ವಿದ್ಯುತ್ ತಂತಿ ಸ್ಪರ್ಶಿಸಿ ಶೇಖರ್ ಶೆಟ್ಟಿ ಪ್ರಾಣ ಕಳೆದುಕೊಂಡಿದ್ದಾರೆ.
ಮೆಸ್ಕಾಂ ವಿದ್ಯುತ್ ಗುತ್ತಿಗೆದಾರರ ನಿರ್ಲಕ್ಷ್ಯ, ಬೇಜವಾಬ್ದಾರಿತನದಿಂದ ಬೈಕ್ ಸವಾರ ಮೃತಪಟ್ಟಿದ್ದಾನೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.