ಚಿನ್ನ ಅಕ್ರಮ ಸಾಗಾಟ ಮಾಡುತ್ತಿದ್ದ ಆರೋಪಿಯ ಸೆರೆ, 13.2 ಲಕ್ಷ ರೂ. ಮೌಲ್ಯದ ಚಿನ್ನ ವಶ! | ಜನತಾ ನ್ಯೂಸ್
ಮಂಗಳೂರು : ದುಬೈಯಿಂದ ಮಂಗಳೂರಿಗೆ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದು, ಲಕ್ಷಾಂತರ ರೂ. ಮೌಲ್ಯದ ಚಿನ್ನ ಸಹಿತ ಆರೋಪಿಯೋರ್ವನನ್ನು ಬಂಧಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಸಿದ್ದಿಕ್ ಮಿಕ್ದಿಮ್ ಹುಸೈನ್ (27) ಬಂಧಿತ ಆರೋಪಿ.. ಈತ ದುಬೈನಿಂದ ಇಂದು ಏರ್ ಇಂಡಿಯಾ ವಿಮಾನದಲ್ಲಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ. ಈತನ ತಪಾಸಣೆ ನಡೆಸಿದಾಗ ಗುದನಾಳದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಸಾಗಾಟ ಮಾಡುತ್ತಿರುವುದು ಪತ್ತೆಯಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ಮಾಡುವ ವೇಳೆ ಆರೋಪಿ ಸಿಕ್ಕಿ ಬಿದ್ದಿದ್ದು, ಈತ ತನ್ನ ಗುದನಾಳದಲ್ಲಿ ಚಿನ್ನವನ್ನು ಪೇಸ್ಟ್ ರೂಪದಲ್ಲಿ ಅಡಗಿಸಿಟ್ಟು ಸಾಗಿಸಿದ್ದು ಪತ್ತೆಯಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯಿಂದ ಸುಮಾರು 13,17,860 ರೂ. ಮೌಲ್ಯದ 262 ಗ್ರಾಂ ಚಿನ್ನವನ್ನು ವಶಕ್ಕೆ ಪಡೆಯಲಾಗಿದೆ. ಚಿನ್ನವನ್ನು ವಶಕ್ಕೆ ಪಡೆದುಕೊಂಡ ಮಂಗಳೂರು ವಿಮಾನ ನಿಲ್ದಾಣದ ಕಸ್ಟಮ್ ಅಧಿಕಾರಿಗಳು ಪ್ರಯಾಣಿಕ ಹುಸೈನ್ನನ್ನು ವಿಚಾರಣೆ ನಡೆಸುತ್ತಿದ್ದಾರೆ.