ಕನ್ನಡ ಭಾಷೆಯ ಅವಹೇಳನಕಾರಿ ಪ್ರಕಟಣೆ : ಕಿಡಿಗೇಡಿ ವೆಬ್ಸೈಟ್ ನಿಂದ ತಪ್ಪು ಮಾಹಿತಿ, ಗೂಗಲ್ ಸರ್ಚ್ ಎಡವಟ್ಟು | ಜನತಾ ನ್ಯೂಸ್
ಬೆಂಗಳೂರು : ಮಾಹಿತಿ ಹುಡುಕುವ ತಂತ್ರಜ್ಞಾನದ ದೈತ್ಯ ಎಂದು ಕರೆಯಲ್ಪಡುವ ಗೂಗಲ್ನಲ್ಲಿ, "ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು?" ಎಂದು ಹುಡುಕಿದರೆ ಕನ್ನಡ ಎಂಬ ಉತ್ತರ ಬರುತ್ತಿದ್ದು, ಶ್ರೀಗಂಧದಷ್ಟೇ ಶ್ರೇಷ್ಠ ಕನ್ನಡದ ಬಗ್ಗೆ ಈ ರೀತಿಯ ಹೇಳಿಕೆ ಕುರಿತು, ಸಾಕಷ್ಟು ಜನರಲ್ಲಿ ಗೂಗಲ್ ಕುರಿತು ಅಸಮಾಧಾನ ಹಾಗೂ ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದ್ದು, ಅನಾವಶ್ಯಕವಾಗಿ ಕನ್ನಡಿಗರನ್ನು, ಕನ್ನಡ ಭಾಷೆಯನ್ನು ಕೀಳೆಂದು ಬಿಂಬಿಸುವ ಯತ್ನದ ವಿರುದ್ಧ ಅಸಮಾಧಾನ ಹೆಚ್ಚಾಗುತ್ತಿದೆ. ಹಲವರು, ಗೂಗಲ್ನಂತಹ ದೊಡ್ಡ ಸಂಸ್ಥೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು, ತಪ್ಪಿತಸ್ತ ವೆಬ್ಸೈಟ್ ಮೇಲೆ ಕ್ರಮ ಹಾಗೂ ಈ ಕೂಡಲೇ ಪ್ರಮಾದವನ್ನು ಸರಿಪಡಿಸಬೇಕು, ಎಂದು ಆಗ್ರಹಿಸಿದ್ದಾರೆ.
ಅಸಲಿಯತ್ತಿನಲ್ಲಿ, debtconsolidationsquad.com ಎಂಬ ವೆಬ್ ಪೋರ್ಟಲ್ ಕನ್ನಡದ ವಿರುದ್ಧ ದ್ವೇಷದ ಕಾರಣದಿಂದಲೋ, ಏನೋ, ಈ ರೀತಿಯ ತಪ್ಪು ಹಾಗೂ ಕೆಟ್ಟ ಕೆಲಸಕ್ಕೆ ಕೈ ಹಾಕಿದ್ದು, ಮಾಹಿತಿ ಪ್ರಕಟಿಸಲಾಗಿದೆ.
ಭಾರತದಲ್ಲೇ ಅತ್ಯಂತ ಕೊಳಕು ಭಾಷೆ ಯಾವುದು? ಎಂಬ ಅರ್ಥವಿಲ್ಲದ ಪ್ರಶ್ನೆಯೇ ಅಪ್ರಯೋಜಕವಾದ ಕಾರಣದಿಂದ, ಬೇರೆ ಯಾವ ಪೋರ್ಟಲ್ ನಲ್ಲೂ ಸಿಗದೇ, ಗೂಗಲ್ ಸರ್ಚ್ ನಲ್ಲಿ ಈ ವೆಬ್ ಪೋರ್ಟಲ್ ನ ಈ ದ್ವೇಷದ ಪ್ರಕಟಣೆ ಕಂಡುಬಂದಿದೆ.
ಗೂಗಲ್ ಲ್ಲಿ Ugliest Language in India ಎಂದು ಹುಡುಕಿದಾಗ ಕನ್ನಡ ಎಂಬ ಉತ್ತರ ಸಿಗುತ್ತಿದೆ. ಆದರೆ, ಆ ಉತ್ತರಕ್ಕೆ ಕಾರಣವಾಗಿರುವ ಕೆಳಗಿನ debtconsolidationsquad.com ಎಂಬ ಜಾಲತಾಣದ ಲಿಂಕ್ ನ್ನು ತೆರೆಯಲು ಪ್ರತ್ನಿಸಿದರೆ ಅದು ಈಗ ಕೆಲಸ ಮಾಡುತ್ತಿಲ್ಲ. ಕನ್ನಡಿಗರ ಆಕ್ರೋಶಕ್ಕೆ ಕಾರಣವಾದ ತಮ್ಮ ಪ್ರಕಟಣೆಯನ್ನು ಆ ವೆಬ್ ಪೋರ್ಟಲ್ ಭಯದಿಂದ ಸದ್ಯ ಹಿಂಪಡೆದಿದೆ.
ಆದರೆ, ಗೂಗಲ್ನ ಕ್ಯಾಶ್ ನಲ್ಲಿ ಈ ಲಿಂಕ್ ಹಾಗೂ ಪ್ರಕಟಣೆ ಅಳಿಸಿ ಹೋಗಲು ಕೆಲವು ಸಮಯ ಬೇಕಾಗುವ ಸಾದ್ಯತೆಗಳಿವೆ. ಈ ಮಧ್ಯೆ, ಯಾವುದೋ ಬೇರೆ ಅಲ್ಪಜ್ಞಾನವಿರುವ ವೆಬ್ ಪೋರ್ಟಲ್ ಪ್ರಕಟಣೆಯ ತಪ್ಪಿನ ಬಿಸಿಯನ್ನು ಗೂಗಲ್ ಸರ್ಚ್ ಇಂಜಿನ್ ಎದುರಿಸಬೇಕಾಗಿದೆ.
ಗೂಗಲ್ನಲ್ಲಿ ಈ ರೀತಿಯ ಉತ್ತರ ಬರಲು ಕಾರಣ ಈ ವೆಬ್ಸೈಟ್ನಲ್ಲಿ ಪ್ರಕಟವಾದ ಲೇಖನವಾಗಿದ್ದು ಸದ್ಯ ಅದು ಮರೆಯಾಗಿರುವುದರಿಂದ ಲೇಖನದಲ್ಲಿ ಏನಿತ್ತು, ಯಾವೆಲ್ಲಾ ವಿಚಾರಗಳನ್ನು ಪ್ರಸ್ತಾಪಿಸಲಾಗಿತ್ತು, ಎಂಬ ಮಾಹಿತಿ ಸಿಕ್ಕಿಲ್ಲ.