ಅಂಗಾಂಗ ಕಸಿಗೆ ಒಳಗಾಗಿದ್ದ ಮಹಿಳೆ ಯಶಸ್ವಿ ಹೆರಿಗೆ, ಗಂಡು ಮಗುವಿಗೆ ಜನ್ಮ! | ಜನತಾ ನ್ಯೂಸ್
ಮೈಸೂರು : ಮಧುಮೇಹದೊಂದಿಗೆ ಮೂತ್ರಪಿಂಡ ಕಾಯಿಲೆಗೆ ಒಳಗಾಗಿದ್ದ 35 ವರ್ಷದ ಗರ್ಭಿಣಿಗೆ ಯಾವುದೇ ಅಪಾಯವಿಲ್ಲದೇ ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಮೈಸೂರಿನ ಅಪೋಲೋ ಬಿಜಿಎಸ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಬಾಲ್ಯದಿಂದಲೇ ಮಧುಮೇಹಕ್ಕೆ ಒಳಗಾಗಿದ್ದ 35 ವರ್ಷದ ಮಹಿಳೆಗೆ ಕಳೆದ ಮೂರು ವರ್ಷಗಳ ಹಿಂದೆ ಅಪೊಲೋ ಆಸ್ಪತ್ರೆ ವೈದ್ಯರು ಯಶಸ್ವಿ ಅಂಗಾಂಗ ಕಸಿ ಕಾರ್ಯ ನಡೆಸಿದ್ದರು. ಅಂದು ಏಕಕಾಲಕ್ಕೆ ಮಹಿಳೆಗೆ ಮೇದೋಜಿರಕ ಗ್ರಂಥಿ, ಮೂತ್ರಪಿಂಡಗಳನ್ನ ಕಸಿ ಮಾಡಲಾಗಿತ್ತು.
ಕಸಿಯ ಬಳಿಕ ಆರೋಗ್ಯದಲ್ಲಿ ಚೇತರಿಸಿಕೊಂಡಿದ್ದ ಮಹಿಳೆ ಆ ಬಳಿಕ ಗರ್ಭಿಣಿಯಾಗಿದ್ದರು. ಈ ಗರ್ಭಿಣಿಗೆ ಹೆರಿಗೆಯಾಗಿದ್ದು, ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನು ತಾಯಿ-ಮಗು ಆರೋಗ್ಯವಾಗಿದ್ದಾರೆ. ಈ ಯಶಸ್ವಿ ಹೆರಿಗೆ ದೇಶದಲ್ಲಿಯೇ ಮೊದಲನೇಯದಾಗಿದೆ. ಎಸ್‌ಪಿಕೆಟಿ ನಂತರದ ರೋಗಿಯು ಸ್ವಾಭಾವಿಕವಾಗಿ ಗರ್ಭಧರಿಸಲು ಮತ್ತು ಆರೋಗ್ಯಕರ ಮಗುವಿಗೆ ಜನ್ಮ ನೀಡಲು ಸಾಧ್ಯವಾದ ಮೊದಲ ಪ್ರಕರಣ ಇದಾಗಿದೆ ಎಂದು ಮೈಸೂರಿನ ಅಪೊಲೋ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.