ಕೊರೊನಾ ಎರಡನೇ ಅಲೆಯಲ್ಲಿ 50 ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ! | ಜನತಾ ನ್ಯೂಸ್
ಬೆಂಗಳೂರು : ಕೋವಿಡ್ ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆ: ಸಚಿವೆ ಶಶಿಕಲಾ ಜೊಲ್ಲೆರಾಜ್ಯದಲ್ಲಿ ಕೋವಿಡ್ ಮೂರನೇ ಅಲೆ ಎದುರಿಸಲು ಪ್ರತಿ ತಾಲೂಕಿನಲ್ಲಿಯೂ ಮಕ್ಕಳಿಗಾಗಿ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಹೇಳಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಕೋವಿಡ್ ಮೂರನೇ ಅಲೆ ನಿಯಂತ್ರಣ ಕುರಿತು ಬೆಂಗಳೂರು ನಗರ ಜಿಲ್ಲೆ ಹಾಗೂ ಬಿಬಿಎಂಪಿ ವ್ಯಾಪ್ತಿಯ ಜನ ಪ್ರತಿನಿಧಿಗಳು ಅಧಿಕಾರಿಗಳ ಸಭೆ ನಡೆಸಿ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆಯಲ್ಲಿ ಸುಮಾರು 50 ಮಕ್ಕಳು ತಂದೆ ತಾಯಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಬಾಲ ಸೇವಾ ಯೋಜನೆಯ ಮೂಲಕ ಪ್ರತಿ ತಿಂಗಳು ಮಗುವಿಗೆ 3500 ರೂ. ನೀಡುವುದು, ಅಲ್ಲದೆ ಉಚಿತ ಶಿಕ್ಷಣ ನೀಡುವುದು, 21 ವರ್ಷ ತುಂಬಿದ ಹೆಣ್ಣು ಮಕ್ಕಳಿಗೆ 1 ಲಕ್ಷ ರೂ. ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ಮೂರನೇ ಅಲೆ ನಿಯಂತ್ರಿಸಲು ಮಹಿಳಾ ಮತ್ತು ಮಕ್ಕಳ ಇಲಾಖೆ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ದಿ ಮತ್ತು ಪೊಲೀಸ್ ಇಲಾಖೆ ಮಕ್ಕಳನ್ನು ಗುರುತಿಸುವ ಕೆಲಸವನ್ನು ಮಾಡಲಾಗುತ್ತಿದೆ. ಮಕ್ಕಳಿಗೆ ಸೋಂಕು ದೃಢ ಪಟ್ಟರೆ ಕೊವಿಡ್ ಕೇರ್ ಸೆಂಟರ್ ಗೆ ಮಗುವಿನೊಂದಿಗೆ ತಾಯಿಯೂ ಇರಲು ಅವಕಾಶ ಮಾಡಲಾಗಿದೆ. ಯುವತಿಯರಿಗೆ ಪ್ರತ್ಯೇಕವಾಗಿ ವ್ಯವಸ್ಥೆ ಮಾಡಲಾಗುವುದು. ಅಂಗವಿಕಲರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.