17 ವರ್ಷದ ಬಾಲಕನೊಂದಿಗೆ 20 ವರ್ಷದ ಯುವತಿಯ ಮದುವೆ! ಪ್ರಕರಣ ದಾಖಲು | ಜನತಾ ನ್ಯೂಸ್
ಚಿಕ್ಕಮಗಳೂರು : ಫೇಸ್ ಬುಕ್ ಮುಖಾಂತರ ಪರಿಚಯವಾಗಿ 20 ವರ್ಷ ವಯಸ್ಸಿನ ಯುವತಿ, 17 ವರ್ಷದ ಬಾಲಕನೊಂದಿಗೆ ಮದುವೆಯಾಗಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮೂಲತಃ ಬೆಂಗಳೂರು ಮೂಲದ 20 ವರ್ಷದ ಯುವತಿ ಮಡಿಕೇರಿಯ ವಿರಾಜಪೇಟೆಯಲ್ಲಿ ನರ್ಸಿಂಗ್ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಕಡೂರು ತಾಲೂಕಿನ ಬ್ರಹ್ಮಸಮುದ್ರ ಗ್ರಾಮದ 17 ವರ್ಷದ ಯುವಕನ ಜತೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹವಾಗಿತ್ತು. ಅದು ನಂತರ ಪ್ರೀತಿಯಾಗಿದ್ದು, ಮದುವೆ ಕೂಡ ಮಾಡಿಕೊಂಡಿದ್ದಾರೆ. ಆದರೆ ಈ ಮದುವೆಗೆ ಕಾನೂನು ಅಡ್ಡಿಯಾಗಿದ್ದು, ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ.
ಯುವಕನ ಮನೆಯಲ್ಲಿ ಇದಕ್ಕೆ ವಿರೋಧವಿರಲಿಲ್ಲ. ತಂದೆ ಇಲ್ಲದ ಈ ಯುವಕ ಅಮ್ಮನನ್ನು ಮದುವೆಗೆ ಒಪ್ಪಿಸಿದ್ದು, ತಾಯಿ ಸಂಬಂಧಿಕರ ಜತೆ ಸೇರಿ ಇಬ್ಬರಿಗೂ ಬ್ರಹ್ಮಸಮುದ್ರ ಗ್ರಾಮದ ಅಂತರಘಟ್ಟಮ್ಮನ ದೇವಸ್ಥಾನದಲ್ಲಿ ಜೂನ್ 16ರಂದು ಮದುವೆ ಮಾಡಿದ್ದರು. ಬಾಲಕನನ್ನು ವಿವಾಹವಾಗಿರುವ ಯುವತಿ ವಿರುದ್ದ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಬಾಲ್ಯವಿವಾಹ ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಬಾಲ್ಯ ವಿವಾಹವಾಗಿರುವ ಸಂಬಂಧ ಜೂ.23ರಂದು ಮಕ್ಕಳ ಸಹಾಯವಾಣಿಗೆ ಕರೆ ಬಂದಿದ್ದು, ಸಖರಾಯಪಟ್ಟಣ ಪೋಲಿಸ್ ಸಿಬ್ಬಂದಿ ಅಂಗನವಾಡಿ ಮೇಲ್ವಿಚಾರಕಿ, ಗ್ರಾ.ಪಂ. ಕಾರ್ಯದರ್ಶಿ, ಮಕ್ಕಳ ಸಹಾಯವಾಣಿ ಸಿಬ್ಬಂದಿ ಯುವತಿಯನ್ನು ವಶಕ್ಕೆ ಪಡೆದಿದ್ದಾರೆ. ಯುವತಿಯನ್ನು ಚಿಕ್ಕಮಗಳೂರು ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ.