ಸ್ನೇಹಿತನ ಬರ್ತ್ ಡೇ ಪಾರ್ಟಿಗೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರ ವಿದ್ಯಾರ್ಥಿಗಳಿಬ್ಬರು ನೀರುಪಾಲು! | ಜನತಾ ನ್ಯೂಸ್
ಮೈಸೂರು : ಬರ್ತ್ಡೇ ಪಾರ್ಟಿಗೆ ಹೋಗಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರು ಕಾವೇರಿ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಜಿಲ್ಲೆಯ ತಿ.ನರಸೀಪುರ ತಾಲೂಕಿನ ತಡಿಮಾಲಂಗಿ ಗ್ರಾಮದ ಬಳಿ ನಡೆದಿದೆ.
ಸ್ನೇಹಿತನ ಬರ್ತ್ ಡೇ ಪಾರ್ಟಿಗೆಂದು ತಿ.ನರಸೀಪುರ ತಾಲೂಕಿನ ತಡಿಮಾಲಂಗಿ ಗ್ರಾಮಕ್ಕೆ ಬಂದಿದ್ದ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಬ್ಬರು ದುರಂತ ಅಂತ್ಯಕಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
ಅಭಿಷೇಕ್ (21) ಮತ್ತು ಅಂಕೇಶ್ (21) ಮೃತ ದುರ್ದೈವಿಗಳು. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಕಿನಕಹಳ್ಳಿ ಗ್ರಾಮದ ನಿವಾಸಿಗಳಾದ ಇವರಿಬ್ಬರು, ಚಾಮರಾಜನಗರದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದರು.
ಸ್ನೇಹಿತನ ಹುಟ್ಟಹಬ್ಬ ಆಚರಿಸಲೆಂದು ಇವರಿಬ್ಬರೂ ತಡಿಮಾಲಂಗಿ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ನದಿಯಲ್ಲಿ ಈಜಲು ಹೋಗಿದ್ದ ಅಭಿಷೇಕ್ ಮತ್ತು ಅಂಕೇಶ್ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಇವರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಭೇಟಿ ನೀಡಿ, ವಿದ್ಯಾರ್ಥಿಗಳ ಮೃತದೇಹಕ್ಕಾಗಿ ಶೋಧ ನಡೆಸುತ್ತಿದ್ದಾರೆ. ಈ ಕುರಿತು ತಲಕಾಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.