ವರದಕ್ಷಿಣೆ ಕಿರುಕುಳ ಆರೋಪ : ಗಂಡ, ಅತ್ತೆಯ ವರದಕ್ಷಿಣೆ ಕಾಟಕ್ಕೆ ಗೃಹಿಣಿ ಆತ್ಮಹತ್ಯೆ | ಜನತಾ ನ್ಯೂಸ್
ಮೈಸೂರು : ನಿದ್ರೆ ಮಾತ್ರೆ ಸೇವಿಸಿ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ನಡೆದಿದೆ. ಗಂಡನ ಮನೆಯವರು ವರದಕ್ಷಿಣೆ ಕಿರುಕುಳ ನೀಡಿದ್ದಾರೆಂದು ಮೃತಳ ಸಂಬಂಧಿಕರು ಆರೋಪ ಮಾಡಿದ್ದಾರೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಬಿಳಿಗೆರೆ ನಿವಾಸಿ ಸೌಮ್ಯಾ (26) ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಮಹಿಳೆ.
ಸೌಮ್ಯಾಗೆ ಮೂರು ವರ್ಷದ ಹಿಂದೆ ಮೈಸೂರಿನ ಆಲನಹಳ್ಳಿ ನಿವಾಸಿ ಗೌತಮ್ ಎಂಬಾತನ ಜತೆ ವಿವಾಹವಾಗಿತ್ತು. ಅಂದು ಸಾಲ ಮಾಡಿ ಅದ್ದೂರಿಯಾಗಿಯೇ ಮದುವೆ ಮಾಡಿಕೊಟ್ಟಿದ್ದರು. ಮಗಳಿಗೆ ಕೈಲಾದಷ್ಟು ಚಿನ್ನಾಭರಣವನ್ನೂ ಕೊಟ್ಟಿದ್ದರು. ಆದರೂ ಮದುವೆ ಆದಾಗಿನಿಂದ ವರದಕ್ಷಿಣೆ ತರುವಂತೆ ಸೌಮ್ಯಾಗೆ ಗಂಡ ಮತ್ತು ಆತನ ಮನೆಯವರು ಕಿರುಕುಳು ಕೊಡುತ್ತಿದ್ದಂತೆ. ಇದನ್ನು ಸಹಿಸಲಾಗದೆ ಸೌಮ್ಯಾ 6 ತಿಂಗಳ ಹಿಂದೆಯೇ ತವರು ಸೇರಿದ್ದಳು.
ಸೌಮ್ಯಾ ತವರು ಮನೆಯಲ್ಲಿ ಇದ್ದರೂ ಪೋನ್ ಮಾಡಿ ಗೌತಮ್ ಹಣ ತರುವಂತೆ ಪೀಡಿಸುತ್ತಿದ್ದ. ಸಾಲ ಮಾಡಿ ಅದ್ದೂರಿಯಾಗಿ ಮದುವೆ ಮಾಡಿಕೊಟ್ಟಿದ್ದ ಸೌಮ್ಯ ಕುಟುಂಬದವರು, ಮದುವೆ ವೇಳೆ ಚಿನ್ನ, ಬೆಳ್ಳಿಯನ್ನು ಕೂಡಾ ಕೊಟ್ಟಿದ್ದರು. ಅಲ್ಲದೇ ವರದಕ್ಷಿಣ ಕಾಟ ತಾಳಲಾರೇ ನಂತರ ಮೂರು ಲಕ್ಷ ಹಣವನ್ನು ಕೊಟ್ಟಿದ್ದರು.
ಎಲ್ಲಾ ಕೊಟ್ಟ ಮೇಲೂ ಮತ್ತೆ ಒಂದು ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಗೌತಮ್ ಮತ್ತು ಅತ್ತೆ ಕಿರುಕುಳ ನೀಡುತ್ತಿದ್ದರಿಂದ ಬೇಸತ್ತ ಗೃಹಿಣಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗಂಡ ಮತ್ತು ಅತ್ತೆ ಕಿರುಕುಳ ಸಹಿಸಲಾಗದೆ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತಳ ತಾಯಿ ಕೆಂಪಮ್ಮ ಆರೋಪಿಸಿದ್ದಾರೆ. ನಂಜನಗೂಡಿನ ಬಿಳಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.