ಕಲಬುರಗಿಯಲ್ಲಿ ಸರಣಿ ಅಪಘಾತ: ಅಣ್ಣ-ತಂಗಿ ಸ್ಥಳದಲ್ಲೇ ಸಾವು, ಐವರಿಗೆ ಗಾಯ | ಜನತಾ ನ್ಯೂಸ್
ಕಲಬುರಗಿ : ಬೈಕ್, ಟೆಂಪೋ ಮತ್ತು ಕಾರು ನಡುವೆ ಸರಣಿ ಅಪಘಾತ ಸಂಭವಿಸಿ, ಬೈಕ್ ನಲ್ಲಿದ್ದ ಇಬ್ಬರು ಸಾವನ್ನಪ್ಪಿರುವ ಘಟನೆ ಕಲಬುರಗಿ ತಾಲೂಕಿನ ಶರಣಸಿರಸಗಿ ಗ್ರಾಮದ ಬಳಿ ನಡೆದಿದೆ.
ಅಫಜಲಪುರ ತಾಲೂಕಿನ ಶಿವೂರು ಗ್ರಾಮದ ನಿವಾಸಿಗಳಾದ ಅಜಯ್ ರೋಡಗಿ (29) ಹಾಗೂ ಪ್ರೇಮಾ ಪ್ರವೀಣ (27) ಮೃತರು ಎಂದು ಗುರುತಿಸಲಾಗಿದೆ. ಇಬ್ಬರು ಮೃತರು ಬೈಕ್ನಲ್ಲಿ ಕಲಬುರಗಿಯಿಂದ ಅಫಜಲಪುರಕ್ಕೆ ಹೊರಟಿದ್ದರು. ಈ ವೇಳೆ ಅವಘಡ ಸಂಭವಿಸಿದ್ದು, ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ದುರ್ಮರಣ ಹೊಂದಿದ್ದಾರೆ.
ಟೆಂಪೋ ಚಾಲಕ ಮೊದಲು ಬೈಕ್ ಗೆ ಢಿಕ್ಕಿ ಹೊಡೆದಿದ್ದಾನೆ. ಇದರಿಂದ ಬೈಕ್ ನಲ್ಲಿದ್ದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಳಿಕ ನಿಯಂತ್ರಣ ತಪ್ಪಿ ಟೆಂಪೋ ಚಾಲಕ ಕಾರಿಗೂ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ವಾಹನಗಳು ರಸ್ತೆ ಪಕ್ಕದ ತಗ್ಗು ಪ್ರದೇಶಕ್ಕೆ ಉರುಳಿ ಬಿದ್ದಿವೆ.
ಐವರಿಗೆ ಗಾಯಗಳಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕಲಬುರಗಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.