ನಳಿನ್ ಕುಮಾರ್ ಕಟೀಲ್ ನೇರ ಚರ್ಚೆಗೆ ಬರಲಿ: ಡಿ ಕೆ ಶಿವಕುಮಾರ್ | ಜನತಾ ನ್ಯೂಸ್
ಚಿತ್ರದುರ್ಗ : ರಾಜ್ಯ ಕಂಡ ದುರಂತ ಸಿಎಂ ಅಂದ್ರೆ ಸಿದ್ದರಾಮಯ್ಯ ಎಂದು ಗುರುವಾರ ಬೆಳಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿದ ಡಿಕೆಶಿ, ಸಿದ್ದರಾಮಯ್ಯ ಕುರಿತು ತಾವು ನೀಡಿದ ಹೇಳಿಕೆ ಬಗ್ಗೆ ಬಹಿರಂಗವಾಗಿ ಚರ್ಚಿಸಲು ಸಿದ್ಧನಿದ್ದೇನೆ ಬನ್ನಿ ಎಂದು ಸವಾಲೆಸೆದರು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನುಡಿದಂತೆ ನಡೆದಿದ್ದಾರೆ, ಮಾತು ತಪ್ಪಿಲ್ಲ. ಬಸವ ಜಯಂತಿ ದಿನ ಪ್ರಮಾಣ ವಚನ ಸ್ವೀಕರಿಸಿ ವಿಧಾನಸೌಧ ಪ್ರವೇಶ ಮಾಡಿದ್ದ ಅವರು, ಪ್ರಣಾಳಿಕೆಯಲ್ಲಿ ನೀಡಿದ ಭರವಸೆ ಪೈಕಿ ಶೇ.99ರಷ್ಟು ಕೆಲಸ ಮಾಡಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಬೇಕಿದ್ದರೆ ಈ ಬಗ್ಗೆ ನೇರ ಚರ್ಚೆಗೆ ಬರಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಆಹ್ವಾನ ನೀಡಿದರು.
ಕಾಂಗ್ರೆಸ್ ನಲ್ಲಿ ಮ್ಯಾಸಿಕಲ್ ಚೇರ್ ಆಟ ನಡೆಯುತ್ತಿದೆ ಎಂದ ನಳಿನ್ ಕಟೀಲ್ ಗೆ ತಿರುಗೇಟು ನೀಡಿದ ಅವರು,ಕಾಂಗ್ರೆಸ್ ನಲ್ಲಿ ಮ್ಯೂಸಿಕಲ್ ಚೇರ್ ಆಟ ನಡೆಯುತ್ತಿದೆಯೋ, ಬೇರೆ ಯಾವುದೋ. ಆದರೆಬಿಜೆಪಿಯಲ್ಲಿ ನಡೆಯುತ್ತಿದೆಯಲ್ಲ ಅದು ಯಾವ ಚೇರ್ ಆಟ ಎಂದು ಪ್ರಶ್ನಿಸಿದರು.
ಕೋವಿಡ್ನಿಂದ ಉದ್ಯೋಗ ಕಳೆದುಕೊಂಡು ಸಂಕಷ್ಟದಲ್ಲಿ ಸಿಲುಕಿರುವ ರಾಜ್ಯದ ಜನರ ನೋವನ್ನು ಆಲಿಸಲು ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದೇನೆ. ಇದು ಕಾಂಗ್ರೆಸ್ಸಿನ ಎಲ್ಲರ ಕಾರ್ಯಕ್ರಮ, ಶಿವಕುಮಾರ್ ಒಬ್ಬನದ್ದಲ್ಲ ಎಂದು ಸ್ಪಷ್ಟಪಡಿಸಿದರು.