ದೆಹಲಿ ಪ್ರವಾಸಕ್ಕೆ ಸಿಎಂ ಬಿಎಸ್‍ವೈ 6 ಬ್ಯಾಗ್ ಕೊಂಡೊಯ್ದಿದ್ದಾರೆ, ಏಕೆ?: ಎಚ್.ಡಿ. ಕುಮಾರಸ್ವಾಮಿ | ಜನತಾ ನ್ಯೂಸ್
ಬೆಂಗಳೂರು : ಸಿಎಂ ಯಡಿಯೂರಪ್ಪ ಹಾಗೂ ಬಿ.ವೈ. ವಿಜಯೇಂದ್ರ ದೆಹಲಿ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಸಿಎಂ ನಿನ್ನೆ ದೆಹಲಿಗೆ ಹೋಗುವಾಗ ಆರು ಬ್ಯಾಗ್ಗಳನ್ನು ಜೊತೆಯಲ್ಲಿ ತೆಗೆದುಕೊಂಡು ಹೋಗಿದ್ದಾರೆ. ಹೈಕಮಾಂಡ್ಗೆ ಕೊಡುವುದಕ್ಕೆ ನಿನ್ನೆ ವಿಶೇಷ ವಿಮಾನದಲ್ಲಿ ಹೋಗುವಾಗ ಬ್ಯಾಗ್ಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅನ್ನುವ ಮಾಹಿತಿ ಇದೆ ಎಂದು ಹೆಚ್ಡಿಕೆ ಹೊಸ ಬಾಂಬ್ ಸಿಡಿಸಿದ್ದಾರೆ.
ಶನಿವಾರ ಇಲ್ಲಿನ ಜೆಪಿ ಭವನದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, "ಬಿಎಸ್‍ವೈ ಅವರು ವಿಶೇಷ ವಿಮಾನದಲ್ಲಿ ಆರು ಬ್ಯಾಗ್ ತೆಗೆದುಕೊಂಡು ಹೋಗಿದ್ದು, ಅವುಗಳಲ್ಲಿ ಉಡುಗೊರೆ ಇದೆಯೋ, ಬೇರೆ ಏನಾದರೂ ಇದೆಯೋ ಎನ್ನುವುದನ್ನು ಅವರೇ ಹೇಳಬೇಕು. ಆದರೆ, ಅವರು ಬ್ಯಾಗ್ ತೆಗೆದುಕೊಂಡು ಹೋಗಿರುವ ಮಾಹಿತಿ ನನಗೆ ಬಂದಿರುವುದಂತೂ ಹೌದು" ಎಂದು ತಿಳಿಸಿದರು.
ಪ್ರಧಾನಿಗಳನ್ನು ಭೇಟಿ ಮಾಡೋಕೆ ಸಿಎಂ ಒಬ್ಬರೇ ಹೋಗಿದ್ರಾ..? ಅಥವಾ ಬ್ಯಾಗ್ಗಳನ್ನು ತೆಗೆದುಕೊಂಡು ಹೋಗಿ ಭೇಟಿ ಮಾಡಿದ್ರಾ..? ಎಂಬುದನ್ನು ಸಿಎಂ ಸ್ಪಷ್ಟಪಡಿಸಬೇಕು ಎಂದು ಅವರು ಇದೇ ವೇಳೆ ಹೇಳಿದರು.
ಸಂಸದೆ ಸುಮಲತಾ ಅಂಬರೀಶ್ ರಾಜ್ಯಪಾಲರ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅವರ ಬಗ್ಗೆ ನಾನು ಮಾತನಾಡೋದಿಲ್ಲ. ರಾಜ್ಯಾದ್ಯಂತ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಅಕ್ರಮ ಗಣಿಗಾರಿಕೆ ಬಗ್ಗೆ ಈ ಹಿಂದೆ ಹಲವಾರು ಬಾರಿ ಪ್ರಸ್ತಾಪ ಮಾಡಿದ್ದೆ. ಅಕ್ರಮ ಗಣಿಗಾರಿಕೆ ವಿರುದ್ಧ ಯಾರೇ ನಾಯಕರು ಹೋರಾಡಿದರೂ ವೈಯಕ್ತಿಕವಾಗಿ ನಾನು ಹಾಗೂ ನಮ್ಮ ಪಕ್ಷ ಬೆಂಬಲ ನೀಡಲಿದೆ ಎಂದರು.
ಮೇಕೆದಾಟು ಮತ್ತು ಮಹದಾಯಿ ಯೋಜನೆಯ ಬಗ್ಗೆ ಕೇಂದ್ರ ಜಲಶಕ್ತಿ ಸಚಿವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಚರ್ಚೆಯನ್ನೆ ಮಾಡಿಲ್ಲ ಎಂಬುದು ಬಹಿರಂಗವಾಗಿದೆ. ಆದರೆ, ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯ ಬಗ್ಗೆ ಕೇಂದ್ರ ಸರಕಾರದ ನಿರ್ಲಕ್ಷ್ಯ ಧೋರಣೆ ಸರಿಯಲ್ಲ ಎಂದು ಆಕ್ಷೇಪಿಸಿದ ಕುಮಾರಸ್ವಾಮಿ, ಕೇಂದ್ರ ಸಚಿವ ರಾಜ್ಯಕ್ಕೆ ಬಂದಿದ್ದು ಜಲಜೀವನ್ ಮೀಷನ್ ಯೋಜನೆ ಅನುಷ್ಠಾನ ಸಂಬಂಧ ಎಂದು ಹೇಳಿದರು.