ರಾಷ್ಟ್ರೀಯ ನಾಯಕರು ನಮ್ಮವರೇ, ಯಾರೂ ಹಗುರವಾಗಿ ಮಾತನಾಡಬಾರದು : ಶೋಭಾ ಕರಂದ್ಲಾಜೆ | ಜನತಾ ನ್ಯೂಸ್
ಚಿಕ್ಕಮಗಳೂರು : ಎಲ್ಲಾ ರಾಷ್ಟ್ರೀಯ ನಾಯಕರು ನಮ್ಮವರೇ. ಯಾರೂ ಯಾರ ಬಗ್ಗೆಯೂ ಮಾತನಾಡಬಾರದು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಇಂದಿರಾ ಕ್ಯಾಂಟಿನ್ ವಿಚಾರಕ್ಕೆ ಸಿ.ಟಿ.ರವಿ ನೀಡಿರುವ ಹುಕ್ಕಾ ಬಾರ್, ಮದ್ಯ ಸೇವನೆ ಬಗ್ಗೆ ಭಾರೀ ಚರ್ಚೆಯಾಗುತ್ತಿರುವ ಬಗ್ಗೆ ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ದೇಶದ ಎಲ್ಲ ನಾಯಕರೂ ಗೌರವಾನ್ವಿತರೇ ಆಗಿದ್ದಾರೆ.
ಎಲ್ಲಾ ನಾಯಕರು ಅವರವರ ಕಾಲ ಘಟ್ಟದಲ್ಲಿ ದೇಶಕ್ಕೆ ಮತ್ತು ಜನತೆಗೆ ಒಳಿತಾಗುವ ಕೆಲಸ ಮಾಡಿದ್ದಾರೆ. ಇದಕ್ಕೆ ಪಕ್ಷ, ಜಾತಿ, ಧರ್ಮದ ಭೇದವಿಲ್ಲ. ಯಾರು ಯಾರ ಬಗ್ಗೆಯೂ ಹಗುರವಾಗಿ ಮಾತನಾಡಬಾರದು. ನಮ್ಮ ಎಲ್ಲಾ ನಾಯಕರು ಗೌರವಾನ್ವಿತರು. ಅವರ ಬಗ್ಗೆ ಯಾರೇ ಮಾತನಾಡಿದರೂ ಅದು ತಪ್ಪು. ಹಾಗೆಲ್ಲ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಒಂದೇ ದಿನ ಜಿಲ್ಲೆಯ ಚಿಕ್ಕಮಗಳೂರು ನಗರ, ಆಲ್ದೂರು, ಬಾಳೆಹೊನ್ನೂರು, ಶೃಂಗೇರಿಯಲ್ಲಿ ನಾಲ್ಕು ಕಡೆ ಜನಾಶೀರ್ವಾದ ಯಾತ್ರೆ ನಡೆಸಿ ಕಾರ್ಯಕರ್ತರನ್ನ ಹುರಿದುಂಬಿಸಿದರು. ಬಳಿಕ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಸಮೀಪದ ರಂಭಾಪುರಿ ಮಠಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದರು.
ಜಗದ್ಗುರುಗಳ ಜೊತೆ ಸುಮಾರು ಅರ್ಧ ಗಂಟೆಗಳ ಕಾಲ ಮಾತುಕತೆ ನಡೆಸಿದರು. ಈ ವೇಳೆ ಜಗದ್ಗುರು ವೀರ ಸೋಮೇಶ್ವರ ಶ್ರೀಗಳು ಶೋಭಾಗೆ ಕೆಲ ಸಲಹೆಗಳನ್ನ ನೀಡಿದರು. ಶೋಭಾ ಕರಂದ್ಲಾಜೆಗೆ ಪರಿಷತ್ ಉಪಸಭಾಪತಿ ಎಂ.ಕೆ ಪ್ರಾಣೇಶ್, ಮಾಜಿ ಸಚಿವ ಡಿ.ಎನ್ ಜೀವರಾಜ್ ಸಾಥ್ ನೀಡಿದರು.