6 ಕೋಟಿ ರೂ. ಕಿಕ್ ಬ್ಯಾಕ್ ಆರೋಪ: ವಜಾಗೊಳಿಸುವಂತೆ ಸಾ.ರಾ. ಮಹೇಶ್ ಆಗ್ರಹ | ಜನತಾ ನ್ಯೂಸ್
ಮೈಸೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಶಾಸಕ ಸಾ.ರಾ.ಮಹೇಶ್ ಮತ್ತೆ ಹರಿಹಾಯ್ದಿದ್ದು, ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ.
ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಯೋಜನೆ ನೆಪದಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅಕ್ರಮವೆಸಗಿದ್ದಾರೆ ಎಂದು ಸಾ.ರಾ. ಮಹೇಶ್ ಆರೋಪಿಸಿದ್ದಾರೆ. ಇದಕ್ಕೆ ಅವರು ದಾಖಲೆಗಳನ್ನು ಕೂಡ ಪ್ರದರ್ಶಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಬಟ್ಟೆ ಬ್ಯಾಗ್ ಖರೀದಿಗೆ ಜಿಎಸ್‌ಟಿ ಸೇರಿ 9 ರೂ ಆಗುತ್ತದೆ. ಆದರೆ, ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ಕೈಮಗ್ಗ ಇಲಾಖೆಯವರಿಂದ ಖರೀದಿಸದೆ, ಖಾಸಗಿಯವರಿಂದ ಬ್ಯಾಗ್ ಖರೀದಿಸಿದ್ದಾರೆ. ಈ ಒಂದು ಬ್ಯಾಗ್ ಬೆಲೆ 52 ರೂ. ಇದೆ ಎಂದು ಆರೋಪಿಸಿದರು. ಅದರೆ ಮಾರ್ಕೆಟ್ ನಲ್ಲಿ ಒಂದು ಬಟ್ಟೆ ಬ್ಯಾಗ್ ದರ 8-12ರೂ. ಮಾತ್ರ ಎಂದು ಮಹೇಶ್ ಹೇಳಿದ್ದಾರೆ.
ಗುತ್ತಿಗೆಯಲ್ಲಿ ಒಂದು ಬಟ್ಟೆ ಬ್ಯಾಗ್ ನಿಂದ 42 ರೂಪಾಯಿ ಕಮಿಷನ್ ನಂತೆ 6 ಕೋಟಿ ರೂ.ಕಿಕ್ ಬ್ಯಾಕ್ ಹಣ ಪಡೆದಿದ್ದಾರೆ. ಈ ಬಗ್ಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಅವರ ಗಮನಕ್ಕೆ ತಂದು ಕ್ರಮಕೈಗೊಳ್ಳುವಂತೆ ಒತ್ತಾಯಿಸುತ್ತೇನೆ ಎಂದರು.