ಪೊಲೀಸ್ ಮಾಹಿತಿದಾರನೇ ಡ್ರಗ್ಸ್ ದಂಧೆಯಲ್ಲಿ ತೊಡಗಿಕೊಂಡಿದ್ದ ಡೀಲರ್! | ಜನತಾ ನ್ಯೂಸ್
ಬೆಂಗಳೂರು : ಹಲವು ವರ್ಷಗಳಿಂದ ಪೊಲೀಸ್ ಮಾಹಿತಿದಾರನಾಗಿ ಗುರುತಿಸಿಕೊಂಡಿದ್ದ ವ್ಯಕ್ತಿಯ ನಿಜ ಬಣ್ಣ ಕೊನೆಗೂ ಬಯಲಾಗಿದೆ. ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪದಡಿ ಈತನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಏರ್ಗನ್, 150 ಗ್ರಾಂ ಗಾಂಜಾ, 150 ಗ್ರಾಂ ಅಫೀಮು ವಶಕ್ಕೆ ಪಡೆದುಕೊಳ್ಳಲಾಗಿದೆ.
ರಾಜಸ್ಥಾನ ಮೂಲದ ರತನ್ಲಾಲ್ನನ್ನು 5 ದಿನಗಳ ಕಾಲ ವಶಕ್ಕೆ ಪಡೆದಿರುವ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿಯು ಹಲವು ವರ್ಷಗಳಿಂದ ಖುದ್ದು ಡ್ರಗ್ಸ್ ದಂಧೆ ನಡೆಸುತ್ತಿದ್ದ. ಡ್ರಗ್ಸ್ನಿಂದಲೇ ಹಣ ಸಂಪಾದನೆಗೆ ಇಳಿದಿದ್ದ. ತನ್ನ ಡ್ರಗ್ಸ್ ಮಾಫಿಯಾಗೆ ಪೊಲೀಸರನ್ನೇ ಗಾಳ ಮಾಡಿಕೊಂಡಿದ್ದ ರತನ್ ಲಾಲ್, ತನ್ನ ಮೇಲೆ ಅನುಮಾನ ಬಾರದಿರಲೆಂದು ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡಿಕೊಂಡಿದ್ದ.
ಗಾಂಜಾ, ಆಫೀಮನ್ನು ಆಂಧ್ರ ಪ್ರದೇಶದ ವೈಜಾಗ್ನಲ್ಲಿ ಖರೀದಿಸುತ್ತಿದ್ದ. ಸಾಮಾನ್ಯವಾಗಿ ಆಂಧ್ರದ ಗುಡ್ಡಗಾಡು ಪ್ರದೇಶಗಳಲ್ಲಿ ನಕ್ಸಲರು ಗಾಂಜಾ ಬೆಳೆಯುವ ಶಂಕೆ ವ್ಯಕ್ತವಾಗಿದೆ. ರತನ್ ಸಹ ಆಂಧ್ರದಲ್ಲಿರುವ ನಕ್ಸಲ್ ಸಂಪರ್ಕಿತರಿಂದ ಗಾಂಜಾ ಖರೀದಿಸುತ್ತಿದ್ದ ಎಂಬ ಅನುಮಾನ ವ್ಯಕ್ತವಾಗಿದೆ. ನಾನ್ ಸಿಂಥಟಿಕ್ ಡ್ರಗ್ಸ್ನ್ನು ರಾಜಾಸ್ಥಾನ ಮೂಲದ ಪೆಡ್ಲರ್ಗಳಿಂದ ಖರೀದಿಸುತ್ತಿದ್ದ.
ಪ್ರತಿಷ್ಠಿತ ಉದ್ಯಮಿಗಳಿಗೆ ಗಾಂಜಾ, ಆಫೀಮು, ಎಂಡಿಎಂಎ, ಎಕ್ಸ್ಟಿಸಿಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದ. ಸದ್ಯ ಈತ ಯಾರಿಗೆಲ್ಲಾ ಡ್ರಗ್ಸ್ ಮಾರಾಟ ಮಾಡುತ್ತಿದ್ದ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅಲ್ಲದೆ ಆಂಧ್ರದ ನಕ್ಸಲರ ಜೊತೆ ನಂಟಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ವಿಶಾಖಪಟ್ಟಣ ಮತ್ತು ಒಡಿಶಾ ಗಡಿಭಾಗಗಳಲ್ಲಿರುವ ನಕ್ಸಲ್ ಜೊತೆ ನಂಟು ಹೊಂದಿರುವ ಆರೋಪ ಕೇಳಿಬಂದಿದೆ. ಮತ್ತೊಂದು ಕಡೆ ಈತನ ಜೊತೆ ಕೆಲ ಪೊಲೀಸರು ಕೂಡ ಶಾಮೀಲಾಗಿರುವ ಶಂಕೆ ಹಿನ್ನೆಲೆಯಿದ್ದು, ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.