ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ: ರೇವಣ್ಣ | ಜನತಾ ನ್ಯೂಸ್
ಹಾಸನ : ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದು ಬೇಡ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರ ಹಿಡಿಯಲು ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಎಂಬ ವಿಚಾರದ ಬಗ್ಗೆ ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಬಿಜೆಪಿಯನ್ನು ಲೇವಡಿ ಮಾಡಿದ್ದಾರೆ. ಮುಳುಗಿನ ಹಡಗಿನ ಸಹವಾಸಕ್ಕೆ ಏಕೆ ಬರುತ್ತೀರಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಜೆಡಿಎಸ್ ಮುಳುಗುವ ಹಡಗು ಎಂದು ಈಗಾಗಲೇ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಹೀಗಾಗಿ ಜೆಡಿಎಸ್ ಜೊತೆ ಹೊಂದಾಣಿಕೆಯಂತಹ ಸಾಹಸಕ್ಕೆ ಕೈಹಾಕಿ ಮುಖ್ಯಮಂತ್ರಿಗಳು ತಮ್ಮ ಕುರ್ಚಿಗೆ ಕುತ್ತು ತಂದುಕೊಳ್ಳಬೇಡಿ. ಮುಳುಗುವ ಹಡಗಿನ ಜೊತೆ ಹೊಂದಾಣಿಕೆ ಬೇಡ, ಇನ್ನೂ ಎರಡು ವರ್ಷ ನೀವೆ ಸಿಎಂ ಆಗಿ ಇರಬೇಕು. ಮುಖ್ಯಮಂತ್ರಿಗಳಿಗೆ ಮನವಿ ಮಾಡುವುದು ಇಷ್ಟೇ, ನೀವು ಹೊಂದಾಣಿಕೆ ಮಾಡಿಕೊಳ್ಳಲು ಹೋಗಿ ತೊಂದರೆ ಮಾಡಿಕೊಳ್ಳಬೇಡಿ ಎಂದು ಸಿಎಂಗೆ ಕಿವಿಮಾತು ಹೇಳಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಜೆಡಿಎಸ್ ಮುಳುಗೋ ಹಡಗು ಅಂತಾರೆ. ಇತ್ತ ಮುಖ್ಯಮಂತ್ರಿಯವರು ಅವರು ಕುಮಾರಸ್ವಾಮಿ ಜೊತೆ ಸೇರಿ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಅಂತಾರೆ. ದೇವೇಗೌಡರು ರಾಜ್ಯದ ನುರಿತ ರಾಜಕಾರಣಿ. ನಮ್ಮ ಹಡಗು ಮುಳುಗೋ ವೇಳೆ ಅದನ್ನ ತೇಲಿಸೋದು ಹೇಗೆ ಅನ್ನೋದು ಗೊತ್ತಿದೆ. ಮುಳುಗುವಾಗ ತಡೆಯಲು ಬೇಕಾದ ಯಂತ್ರಗಳು ನಮ್ಮ ಬಳಿ ಇವೆ ಎಂದಿದ್ದಾರೆ.